ಶಿರ್ವ : ಪಂಜಿಮಾರು ಕೋಡು ಪರಿಸರದಲ್ಲಿ ಚಿರತೆ ಪ್ರತ್ಯಕ್ಷ
Thumbnail
ಶಿರ್ವ : ಹಗಲು ಹೊತ್ತಿನಲ್ಲಿಯೇ ಚಿರತೆ ಕಂಡು ಬಂದ ಘಟನೆ ಮಂಗಳವಾರ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಮಾರು ಕೋಡು ಪರಿಸರದಲ್ಲಿ ನಡೆದಿದೆ. ಪಂಜಿಮಾರು ಸೋದೆ ಮಠದ ಬಳಿ ರಸ್ತೆಯಲ್ಲಿ ಬೈಕ್ ಸವಾರನೋರ್ವ ರಸ್ತೆಯಲ್ಲಿ ಸಾಗುವಾಗ ಚಿರತೆ ಅಡ್ಡ ಬಂದ ಘಟನೆ ನಡೆದಿದೆ. ಹಲವು ದಿನಗಳಿಂದ ಪಡುಬೆಳ್ಳೆ, ಕುರ್ಕಾಲು, ಕುಂಜಾರು ಭಾಗದಲ್ಲಿ ಚಿರತೆಯ ಹಾವಳಿ ಬಗ್ಗೆ ದೂರುಗಳಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೆಲವು ದಿನಗಳಿಂದ ಹಲವರ ಮನೆಗಳ ನಾಯಿಗಳೂ ಮಾಯವಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಶೆಟ್ಟಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ರಕ್ಷಕ ಚರಣ್ ಜೋಗಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಬೋನು ತಂದು ಇರಿಸಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸುವಂತೆ ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ
03 Dec 2024, 11:30 PM
Category: Kaup
Tags: