ರೋಬೋಸೋಫ್ಟ್ ಸಂಸ್ಥೆಯಿಂದ ಉಡುಪಿ ಜಿಲ್ಲಾ ಪಂಚಾಯತ್ ಗೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಹಸ್ತಾಂತರ
Thumbnail
ಉಡುಪಿ : ಸ್ವಚ್ಛತೆಯೇ ಸೇವೆ ಎಂಬ ಧೈಯವಾಕ್ಯದೊಂದಿಗೆ ಪರಿಸರ ಸುಸ್ಥಿರತೆ ಮತ್ತು ಹಸಿರು ಶಕ್ತಿಯ ಉತ್ತೇಜನದ ಕಡೆಗೆ ಹೆಜ್ಜೆ ಇಡುವ ನಿಟ್ಟಿನಲ್ಲಿ ಉಡುಪಿಯ ಐಟಿ ಕಂಪನಿಯಾದ ರೋಬೋಸೋಫ್ಟ್ ಟೆಕ್ನಾಲಜೀಸ್ ಸಿಎಸ್‌ಆರ್ ಕಾರ್ಯಕ್ರಮದ ಅಡಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಗೆ ಉಡುಪಿಯ ಹಲವಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ಬಳಸಲು 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಹಸ್ತಾಂತರಿಸಿತು. ರೋಬೋಸೋಫ್‌ ಟೆಕ್ನಾಲಜೀಸ್ ಕಂಪನಿಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿತೇಜ ಬೊಮ್ಮಿರೆಡ್ಡಿಪಲ್ಲಿಯವರು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ರೋಬೋಸೋಫ್ಟ್ ಸಂಸ್ಥೆ ಕೈಗೊಂಡಿರುವ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಎಲೆಕ್ಟ್ರಿಕ್ ಆಟೋ ರಿಕ್ಷಾ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಗೆ ತುಂಬಾ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಉಡುಪಿ ಜಿಲ್ಲೆಯು ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಆರ್ಥಿಕ ಚಟುವಟಿಕೆಯಾಗಿಸುವಲ್ಲಿ ಹೇಗೆ ಯಶಸ್ಸು ಸಾಧಿಸಿದೆ ಎಂದು ವಿವರಿಸಿದರು. ರೋಬೋಸೋಫ್ಟ್ ಸಂಸ್ಥೆಯ ಸ್ವಚ್ಛತೆಯೇ ಸೇವೆ ಎಂಬ ಸಂಕಲ್ಪ ಮತ್ತು ಈ ನಿಟ್ಟಿನಲ್ಲಿ ಕಂಪನಿಯ ಪ್ರಯತ್ನ ಮತ್ತು ಸಹಕಾರಕ್ಕೆ ಉಡುಪಿಯ ಸ್ಥಳೀಯ ಆಡಳಿತದ ಪರವಾಗಿ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಸ್ಥೆಯ ರವಿತೇಜ ಬೊಮ್ಮಿರೆಡ್ಡಿಪಲ್ಲಿ ಮಾತನಾಡಿ ರೋಬೋಸೋಫ್ಟ್ ಕಂಪನಿ ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕೈಗೊಂಡ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಭವಿಷ್ಯದಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕರಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಕಂಪನಿ ಮಾತೃ ಸಂಸ್ಥೆ ಟೆಕ್ನೊಪ್ರೋ ಜಪಾನ್ ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕಂಪನಿಯ ಉದ್ಯೋಗಿ ನಾಗೇಶ್ ದೊಂಡಿಯ ಸ್ವಾಗತಿಸಿ, ವಂದಿಸಿದರು.
Additional image
20 Dec 2024, 12:04 PM
Category: Kaup
Tags: