ಕಾಪು : ತೆಂಗು, ಮಲ್ಲಿಗೆ, ಭತ್ತ ಬೆಳೆಯ ಮಾಹಿತಿ ; ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರಧಾನ
ಕಾಪು : ಕಾಪು ಸಹಕಾರಿ ವ್ಯವಸಾಯಿಕ ಸಂಘ (ನಿ.) ಕಾಪು ಉಳಿಯಾರಗೋಳಿ ವತಿಯಿಂದ ವೈಜ್ಞಾನಿಕ ತೆಂಗು ಬೇಸಾಯ ಮತ್ತು ಮಲ್ಲಿಗೆ ಕೃಷಿ, ಭತ್ತದ ಬೆಳೆಯಲ್ಲಿ ಲಾಭದಾಯಕ ಕ್ರಮಗಳು ಹಾಗೂ ಹೈನುಗಾರಿಕೆಯ ಬಗ್ಗೆ ಸಮಗ್ರ ಮಾಹಿತಿ ಕಾರ್ಯಕ್ರಮ ಮತ್ತು ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕಾಪು ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಕಾಪು ಇದರ ಆಡಳಿತ ಮೊಕ್ತೇಸರ ಮನೋಹರ ಎಸ್ ಶೆಟ್ಟಿ, ಕೃಷಿಕರ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಬೆಲೆ ದೊರೆಯುತ್ತಿಲ್ಲ. ಸಹಕಾರಿ ವ್ಯವಸಾಯಿಕ ಸಂಘಗಳ ಮೂಲಕ ರೈತರಿಗೆ ಬೆಳೆ ಕಟಾವು, ಇನ್ನಿತರ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡುವ ಮೂಲಕ ಮಧ್ಯವರ್ತಿಗಳಿಂದ ಆಗುವ ನಷ್ಟ ತಪ್ಪಿಸಬೇಕಾಗಿದೆ. ಯುವಕರು ಕೃಷಿ ಬಗ್ಗೆ ಆಸಕ್ತಿ ವಹಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಸೇನಾ ವಾಹನದ ಅವಘಡದಲ್ಲಿ ಮೃತಪಟ್ಟ ಕುಂದಾಪುರ ಬೀಜಾಡಿ ಗ್ರಾಮದ ಸೈನಿಕ ಅನೂಪ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಶಸ್ತಿ ಪ್ರದಾನ/ಸನ್ಮಾನ : ಗುರುರಾಜ್ ಭಟ್ ಉಳಿಯಾರು, ಐತಪ್ಪ ಎಸ್ ಕೋಟ್ಯಾನ್, ಕೃಷ್ಣ ಸೇರಿಗಾರ ಉಳಿಯಾರಗೊಳಿ, ನಿತ್ಯಾನಂದ ನಾಯಕ್ ಪಾಲುಮೆ, ಯೋಗೀಶ್ ಪೂಜಾರಿ ಮೂಳೂರು, ಜಗದೀಶ ದೇವಾಡಿಗ ಮಲ್ಲಾರು ಇವರಿಗೆ ಅತ್ಯುತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭತ್ತದ ಕೃಷಿಯಲ್ಲಿ ತೊಡಗಿರುವ ಮನೋಹರ ಎಸ್ ಶೆಟ್ಟಿ, ರತ್ನಾಕರ ಶೆಟ್ಟಿ ನಡಿಕೆರೆ ಇವರನ್ನು ಸನ್ಮಾನಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ವೈಜ್ಞಾನಿಕ ತೆಂಗು ಬೇಸಾಯ ಮತ್ತು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಭತ್ತದ ಬೆಳೆಯಲ್ಲಿ ಲಾಭದಾಯಕ ಕ್ರಮ ವಿಷಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಕಾಪು ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಡುಪಿ ಜಿಲ್ಲಾ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಲ್. ಹೇಮಂತ್ ಕುಮಾರ್, ವಲಯ ಮೇಲ್ವಿಚಾರಕ ಬಾಲಗೋಪಾಲ ಬಲ್ಲಾಳ್, ಕಾಪು ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ದಿನೇಶ್ ಎ ಸಾಲ್ಯಾನ್, ಡಾ. ಮಾಧವ ಐತಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ ಎಂ.ಶೆಟ್ಟಿ ಉಪಸ್ಥಿತರಿದ್ದರು.
ಕಾಪು ದಿವಾಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಅರ್ಚನಾ ಎಂ.ಶೆಟ್ಟಿ ವಂದಿಸಿದರು.
