ವಿಶ್ವಮಾನವನಾಗಬೇಕೆಂಬುದು ಕುವೆಂಪುರವರ ಕನಸಾಗಿತ್ತು : ಕುಸುಮಾ ಕೆ.ಆರ್.
Thumbnail
ಮಂಗಳೂರು : ಹುಟ್ಟುವ ಪ್ರತಿ ಮಗು ವಿಶ್ವಮಾನವನೇ. ಆನಂತರ ಆ ಮಗುವನ್ನು ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪುರವರಿಗಿತ್ತು ಎಂದು ಶಿಕ್ಷಕಿ ಕುಸುಮಾ ಕೆ. ಆರ್ ಹೇಳಿದರು. ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಾರಥ್ಯದಲ್ಲಿ ಜ5ರಂದು ಮಂಗಳೂರು ಪುರಭವನದ ಎದುರಿನ ರಾಜಾಜಿ ಪಾರ್ಕ್ನಲ್ಲಿ ಕುವೆಂಪು ಜನ್ಮ ದಿನದ ಪ್ರಯುಕ್ತ ನಡೆದ “ಕನ್ನಡವೇ ಸತ್ಯ” ವಿಚಾರಗೋಷ್ಠಿ-ಕವಿಗೋಷ್ಠಿ ಮತ್ತು ಗೀತಗಾಯನ ಉದ್ಘಾಟಿಸಿ ಮಾತನಾಡಿದರು. ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಕೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಅವರ ಕನಸನ್ನು ನನಸಾಗಿಸುವ ಪ್ರಯತ್ನ ನಮ್ಮದಾಗಬೇಕು. ಇಂದಿನ ಈ ಕನ್ನಡವೇ ಸತ್ಯ ಕಾರ್ಯಕ್ರಮವು ನಿಜಕ್ಕೂ ರಸಋಷಿಗೆ ಸಮರ್ಪಣೆ ಎಂದು ನುಡಿದರು. ಈ ಸಂದರ್ಭದಲ್ಲಿ ಹೊಸ ಕನ್ನಡ ಎಂಬ ಪತ್ರಿಕೆಯನ್ನು ಮಂಗಳೂರಿನ ಜನಪ್ರಿಯ ವೈದ್ಯ, ಸಾಹಿತಿ ಡಾ.ಸುರೇಶ್ ನೆಗಳಗುಳಿ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳು ಸಾಕಷ್ಟು ಇದ್ದರೂ ಪತ್ರಿಕೆ ಓದುವ ಹವ್ಯಾಸ ಈಗಲೂ ಇರುವುದರಿಂದ ಇಂತಹ ಪತ್ರಿಕೆಗಳು ಮೂಡಿಬರಲು ಸಾಧ್ಯ. ಪತ್ರಿಕೆ ತನ್ನ ವಸ್ತುನಿಷ್ಠತೆಯನ್ನು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮರೆಯದೆ ಕರ್ತವ್ಯ ನಿರ್ವಹಿಸಬೇಕು. ಹಾಗೇನೇ ಪತ್ರಿಕೆ ಬೆಳೆಯಬೇಕಾದರೆ ಪತ್ರಿಕೆಯನ್ನು ಕೊಂಡು ಓದುವ ಮನಸ್ಥಿತಿ ಹೆಚ್ಚಾಗಬೇಕು ಎಂದು ಮಾರ್ಮಿಕವಾಗಿ ನುಡಿದರು. ಅಧ್ಯಕ್ಷತೆ ವಹಿಸಿದ್ದ ಕೆಎಸ್ಎಸ್ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪುರವರು ಒಂದು ದೊಡ್ಡ ಜ್ಞಾನ ಭಂಡಾರವೇ ಸರಿ. ಅವರ ಒಂದೊಂದು ಸಾಹಿತ್ಯವು ಕೂಡಾ ಒಂದೊಂದು ಗ್ರಂಥಗಳು ಎಂದು ಹೇಳಬಹುದು. ಅವರು ಒಂದು ಗ್ರಂಥಾಲಯವಲ್ಲ ಅವರು ಒಂದು ವಿಶ್ವವಿದ್ಯಾನಿಲಯವೇ ಸರಿ. ಅಂತಹ ಮಹಾನ್ ಚೇತನರನ್ನು ನೆನಯುವುದು ಕನ್ನಡಿಗರಾದ ನಮ್ಮ ಕರ್ತವ್ಯ ಮತ್ತು ಜವಾಬ್ಧಾರಿ ಎಂದು ಹೇಳಿದರು. ಮಂಗಳೂರು ಮಹಾನಗರಪಾಲಿಕೆ ನಗರ ಯೋಜನಾಧಿಕಾರಿ ಎನ್ ನಾಗೇಂದ್ರ, ಪುತ್ತೂರು ಸತ್ಯಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಟಿನಿ, ಎನ್ಎಸ್ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ, ಮತ್ತು ಪತ್ರಕರ್ತ ಲೋಕಯ್ಯ ಶಿಶಿಲ ಉಪಸ್ಥಿತರಿದ್ದರು. ಕವಿಗೋಷ್ಟಿ : ಕಬಕ ಸರಕಾರಿ ಪದವಿಪೂರ್ವ ಕಾಲೇಜು ಶಿಕ್ಷಕಿ ಶ್ರೀಮತಿ ಶಾಂತ ಪುತ್ತೂರು ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಅನುರಾಧ ರಾಜೀವ ಸುರತ್ಕಲ್ , ಎಂ.ಎಸ್.ವೆಂಕಟೇಶ್ ಗಟ್ಟಿ , ದೀಪಾ ಚಿಲಿಂಬಿ, ಅನಿತಾ ಶೆಣೈ, ನಿಶಾನ್ ಅಂಚನ್, ವೀಣಾ ರಾವ್ ವಾಮಂಜೂರು, ಸಲೀಂ ಅನಾರ್ಕಲಿ, ಉಮೇಶ್ ಕಾರಂತ್, ಬದ್ರುದ್ದೀನ್ ಕೂಳೂರು, ಸುಕಲತ ಶೆಟ್ಟಿ, ಜುಲಿಯೆಟ್ ಫೆರ್ನಾಂಡಿಸ್ ತಮ್ಮ ಸ್ವರಚಿತ ಕವನ ವಾಚಿಸಿದರು. ಕೆಎಸ್ಎಸ್ಎಪಿ ಖಜಾಂಚಿ ವರ್ಷ ನಿಖಿಲ್‌ರಾಜ್ ಪ್ರಾರ್ಥನೆ ಗೈದರು. ಎನ್ಎಸ್ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ವಂದಿಸಿದರು, ದೀಪಾ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು. ಅ ಬಳಿಕ ಗಾಯನ ಕ್ಷೇತ್ರದಲ್ಲಿ ವಿಶ್ವದಾಖಲೆ ನಿರ್ಮಿಸಿದ ಗಂಗಾಧರ್ ಗಾಂಧಿ ಬಳಗದಿಂದ ಗೀತಗಾಯನ ನಡೆಯಿತು.
Additional image Additional image Additional image
07 Jan 2025, 08:41 PM
Category: Kaup
Tags: