ಪಡುಬಿದ್ರಿ ಸಿ.ಎ.ಸೊಸೈಟಿ ಚುನಾವಣೆ : ಹಲವು ವರ್ಷಗಳ ಅವಿರೋಧ ಆಯ್ಕೆಯ ಕಸರತ್ತಿಗೆ ಬ್ರೇಕ್ ಹಾಕಿದ ಪಡುಬಿದ್ರಿ ಸಹಕಾರಿ ಜನಪರ ಒಕ್ಕೂಟ
Thumbnail
ಪಡುಬಿದ್ರಿ : ನಾಲ್ಕು ಶಾಖೆ ಹಾಗೂ ಒಂದು ಕೇಂದ್ರ ಕಚೇರಿಯನ್ನು ಹೊಂದಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ ಸುಮಾರು ಎರಡು ದಶಕಗಳ ಕಾಲ ನಿರ್ದೇಶಕರ ಚುನಾವಣೆ ನಡೆಯದೆ ಕೆಲವು ಬಾರಿ ನಾಮಪತ್ರ ಸಲ್ಲಿಕೆಯಾದರೂ ಕೊನೆ ಕ್ಷಣದಲ್ಲಿ ಹಿಂತೆಗುವ ಪ್ರಕ್ರಿಯೆ ಮೂಲಕ ಅವಿರೋಧ ಆಯ್ಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಾಗುತ್ತಿತ್ತು. ಆದರೆ ಈ ಬಾರಿ ಮುಂದೆಯೂ ಅಧಿಕಾರದ ಹಪಾಹಪಿಯಲ್ಲಿರುವ ತಂಡಕ್ಕೆ ಟಕ್ಕರ್ ನೀಡಲು ಪಡುಬಿದ್ರಿ ಸಹಕಾರಿ ಜನಪರ ಒಕ್ಕೂಟದ ನೇತೃತ್ವದಲ್ಲಿ ಜ.28ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. 13 ನಿರ್ದೇಶಕರ ಚುನಾವಣೆಯಲ್ಲಿ ಆಡಳಿತದಲ್ಲಿದ್ದ ತಂಡ 13, ಹೊಸ ತಂಡ ಕೊನೆ ಕ್ಷಣದಲ್ಲಿ ಕೇವಲ 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆ ಮೂಲಕ ಸಂಪೂರ್ಣ ಹಿಡಿತವಲ್ಲದಿದ್ದರೂ ಆಡಳಿತದಲ್ಲಿ ಸ್ವಲ್ಪ ಮಟ್ಟಿನ ಹಿಡಿತದ ಸಾಧನೆಗೆ ಮುಂದಾಗಿದೆ. ಪ್ರಸ್ತುತ ಆಡಳಿತದ ತಂಡದಲ್ಲಿ ಕಾಂಗ್ರೆಸ್, ಬಿಜೆಪಿ ಬೆಂಬಲಿತರಿದ್ದು ಕೆಲವು ಸದಸ್ಯರ ಬದಲಾವಣೆ ಮಾಡಿದ್ದು, ಚುನಾವಣೆಗಿಳಿದ ಹೊಸ ತಂಡದಲ್ಲಿ ಕಾಂಗ್ರೆಸ್ ನ ಬೆಂಬಲಿತರ ಜೊತೆಗೆ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಈ ಬಾರಿ ಸಾಮಾನ್ಯ ವರ್ಗದಲ್ಲಿ 11 ಮಂದಿ, ಮಹಿಳಾ ಮೀಸಲು, ಹಿಂದುಳಿದ ವರ್ಗ, ಸಾಮಾನ್ಯ ವರ್ಗಗಳಲ್ಲಿ 2-3 ಮಂದಿ ಸ್ಪರ್ಧಿಸಿದ್ದಾರೆ. ಈ ಬಾರಿಯು ಜನಪರ ಒಕ್ಕೂಟ ತಂಡದ ಮಹಿಳಾ ಅಭ್ಯರ್ಥಿಗಳು ನಾಮಪತ್ರ ವಾಪಾಸು ಪಡೆಯುವಂತೆ ಆಡಳಿತದಲ್ಲಿದ್ದ ತಂಡದ ಕೆಲವರು ಒತ್ತಡ ಹಾಕಿದ್ದಾರೆ. ಪೋಲಿಸ್ ವರಿಷ್ಠಾಧಿಕಾರಿಗೆ ದೂರು ನೀಡುವ ಬಗ್ಗೆಯೂ ಜನಪರ ಒಕ್ಕೂಟ ಎಚ್ಚರಿಸಿದೆ. ಹಾಲಿ ತಂಡದ ಪ್ರಕಾರ ಈ ಸಂಘವು ತಮ್ಮ ಅವಧಿಯಲ್ಲಿಯೇ ಪ್ರಗತಿ ಪಥ ಕಂಡಿದ್ದು, ಮುಂದೆಯೂ ಪ್ರಗತಿ ಸಾಧಿಸಲಿದೆ ಎಂದು ಹೇಳಿಕೊಂಡರೆ, ಹೊಸ ತಂಡವು ನಾವು ಪ್ರಗತಿ ಬಯಸುವವರು. ಅಲ್ಲಿಯ ಅವ್ಯವಹಾರಗಳನ್ನು ಜನರಿಗೆ ತಿಳಿಸುವ ಜೊತೆಗೆ ಅವೆಲ್ಲವುಗಳನ್ನು ಪ್ರಶ್ನಿಸಿ, ನ್ಯಾಯದ ದಾರಿಯಲ್ಲಿ ಸಾಗಲಿದ್ದೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಹಾಲಿ ತಂಡಕ್ಕೆ ಪ್ರತಿಷ್ಟೆಯ ಕಣವಾಗಿದ್ದು, ಹೊಸ ತಂಡಕ್ಕೆ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸದಿದ್ದರೂ, ಕೆಲವು ಸ್ಥಾನಗಳನ್ನಾದರು ಪಡೆಯಲು ಕಾತುರರಾಗಿದ್ದಾರೆ. ಎರಡು ತಂಡಗಳು ಗೆಲುವು ನಮ್ಮದೆ ಎನ್ನುವ ವಿಶ್ವಾಸದಲ್ಲಿ ಪ್ರಚಾರ ನಿರತರಾಗಿದ್ದಾರೆ. ಭೃಷ್ಟಾಚಾರ ರಹಿತವಾಗಿ ಸಂಘಕ್ಕೆ ದುಡಿಯುವ, ಊರಿನ ಅಭಿವೃದ್ಧಿಯ ಚಿಂತನೆಯೊಂದಿಗೆ ಸದಸ್ಯರಿಗೆ ಅನುಕೂಲಕರವಾದ ಯೋಜನೆಯನ್ನು ರೂಪಿಸಿ, ಸಹಕಾರಿ ತತ್ವಗಳ ಆಶಯದಂತೆ ನಡೆಯಲಿ ಎಂದು ಸಾರ್ವಜನಿಕರ ಆಶಯವಾಗಿದೆ‌.
28 Jan 2025, 02:23 PM
Category: Kaup
Tags: