ಉಡುಪಿ: ವಳಕಾಡು ಶಾಲಾ ಆವರಣದಲ್ಲಿ ಜೇನುನೊಣ ದಾಳಿ ವಿದ್ಯಾರ್ಥಿಗಳಿಗೆ ಗಾಯ
Thumbnail
ಉಡುಪಿ: ನಗರದ ವಳಕಾಡು ಶಾಲಾ ಆವರಣದಲ್ಲಿ ಜೇನುನೊಣ ದಾಳಿ ಮಾಡಿದ ಪರಿಣಾಮ 40 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ. ಗಾಯಗೊಂಡ 40 ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದು, ಇದರಲ್ಲಿ ಮೂರು ಮಕ್ಕಳನ್ನು ನಗರದ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗಿದೆ. ಒಬ್ಬರು ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 37 ಮಕ್ಕಳು ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಎಲ್ಲರೂ ಆರೋಗ್ಯಕರವಾಗಿದ್ದು, ಯಾರಿಗೂ ಯಾವುದೇ ಅಪಾಯ ಇಲ್ಲ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ. ವಳಕಾಡು ಸಂಯುಕ್ತ ಪ್ರೌಢ ಶಾಲಾ ಆವರಣದಲ್ಲಿ ಆಡುತ್ತಿದ್ದ ಪ್ರೌಢ ಶಾಲಾ ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ, ಕಟ್ಟಡದಲ್ಲಿದ್ದ ಜೇನುಗೂಡಿಗೆ ಕಲ್ಲು ಎಸೆದಿದ್ದ ಎನ್ನಲಾಗಿದೆ. ಇದರಿಂದ ಜೇನುನೊಣಗಳು ಅಲ್ಲಿದ್ದ ಮಕ್ಕಳ ಮೇಲೆ ದಾಳಿ ನಡೆಸಿತ್ತೆನ್ನಲಾಗಿದೆ. ಇದರಿಂದ ಮಕ್ಕಳು ಬೊಬ್ಬೆ ಹಾಕಿ ಓಡಿ ಹೋಗಿದ್ದು, ಕೂಡಲೇ ಶಿಕ್ಷಕರು, ಪೋಷಕರು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ.
28 Jan 2025, 07:59 PM
Category: Kaup
Tags: