ಉಚ್ಚಿಲ ಪೇಟೆಯಲ್ಲಿನ ಸಮಸ್ಯೆ: ಸಮಿತಿ ಸ್ಥಳ ಪರಿಶೀಲನೆ ; ಸಭೆ ; ಜಿಲ್ಲಾಧಿಕಾರಿಗೆ ಶಿಫಾರಸು
Thumbnail
ಉಚ್ಚಿಲ : ಉಚ್ಚಿಲ ಪೇಟೆಯ ರಾ.ಹೆ.66 ರಲ್ಲಿ ನಿರಂತರ ಅಪಘಾತ ಮತ್ತು ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ರಚಿಸಿದ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಅಧ್ಯಕ್ಷತೆಯ ಸಮಿತಿಯು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾತನಾಡಿ, ಅಪಘಾತ ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಪೋಲೀಸ್ ಇಲಾಖೆ ನಿರಂತರವಾಗಿ ರಸ್ತೆ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಇಂದಿನ ಸಭೆಯಲ್ಲಿ ಹಲವಾರು ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಶೀಘ್ರವಾಗಿ ಅವುಗಳನ್ನು ಅನುಷ್ಠಾನಕ್ಕೆ ತರಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಮಾತನಾಡಿ, ಜನರ ಜೀವ ಅಮೂಲ್ಯ. ಇಂದು ಸಮಿತಿಯು ಕೂಲಂಕಷವಾಗಿ ಸ್ಥಳ ಪರಿಶೀಲನೆ ನಡೆಸಿದೆ. ನಿರಂತರ ಅಪಘಾತಗಳಿಗೆ ಕಾರಣಗಳನ್ನು ಪತ್ತೆಹಚ್ಚಿದೆ. ಮುಂದೆ ಈ ರೀತಿ ಆಗದಂತೆ ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಹೆದ್ದಾರಿ ಸ್ಥಳದಲ್ಲಿಯೇ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಶೀಘ್ರವಾಗಿ ಕ್ರಮ ವಹಿಸಲು ತಿಳಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅವಘಡಗಳು ಗಣನೀಯವಾಗಿ ಕಡಿಮೆಯಾಗುವ ಭರವಸೆ ಇದೆ. ಏಕೆಂದರೆ ಜನರ ಜೀವ ಅಮೂಲ್ಯ ಎಂದರು. ಸಮಿತಿಯ ಶಿಫಾರಸುಗಳು : ♦️ರಸ್ತೆಯಲ್ಲಿರುವ ಪ್ರಸ್ತುತ ಬೀದಿ ದೀಪಗಳನ್ನು ತೆಗೆದು ಹೆಚ್ಚು ಪ್ರಖರ ಬೀದಿ ದೀಪಗಳನ್ನು ಅಳವಡಿಸತಕ್ಕದ್ದು. ♦️ರಸ್ತೆಯ ಮದ್ಯ ಉಚ್ಚಿಲ ಪೇಟೆಯಲ್ಲಿ 200ಮೀ ಬ್ಯಾರಿಕೇಡ್ ನಿರ್ಮಿಸಿ ಜನರು ರಸ್ತೆ ದಾಟಲು ವ್ಯವಸ್ಥೆ ಮಾಡಿಕೊಡುವುದು. ♦️ಉಚ್ಚಿಲ ಪೇಟೆ ಮದ್ಯ ಭಾಗದಲ್ಲಿ ರಸ್ತೆ ಮೀಡಿಯನ್ ಓಪನ್ ಮಾಡಲು ಕ್ರಮವಹಿಸತಕ್ಕದ್ದು. ♦️ರಸ್ತೆಯಲ್ಲಿ ಬ್ಲಿಂಕರ್ ಗಳು, ಸುರಕ್ಷತಾ ಸೂಚನಾ ಫಲಕಗಳು, ವೇಗ ನಿಯಂತ್ರಣ ಸೂಚನಾ ಫಲಕಗಳು, ಎಚ್ಚರಿಕೆಯ ಫಲಕಗಳನ್ನು ಅಳವಡಿಸತಕ್ಕದ್ದು. ♦️ ಉಚ್ಚಿಲ ಪೇಟೆಯಲ್ಲಿ ಹೈ ಮಾಸ್ಟ್ ದೀಪ ಅಳವಡಿಸುವುದು ಇತ್ಯಾದಿ. ಸ್ಥಳ ಪರಿಶೀಲನಾ ವರದಿ ಮತ್ತು ಶಿಫಾರಸುಗಳನ್ನು ಸಮಿತಿಯು ಮಾನ್ಯ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಿದೆ. ಸಮಿತಿಯ ಸದಸ್ಯರಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಪಿ.ಡಿ. ಜಾವೇದ್, ಆರ್ ಟಿ ಒ ಅಧಿಕಾರಿ ಎಲ್ ಬಿ ನಾಯಕ್, ಮೆಸ್ಕಾಂ ಎಇಇ ಅರವಿಂದ್, ಸದಸ್ಯ ಕಾರ್ಯದರ್ಶಿ ಕಾಪು ತಹಶಿಲ್ದಾರ್ ಡಾ.ಪ್ರತಿಭಾ ಆರ್, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನಕುಮಾರ್, ಕಾಪು ವೃತ್ತನಿರೀಕ್ಷಕಿ ಜಯಶ್ರೀ, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.
Additional image
06 Feb 2025, 04:44 PM
Category: Kaup
Tags: