ಶಿರ್ವ : ಬೆಳ್ಳೆ ಗ್ರಾಮದ ಪಾಂಬೂರಿನಲ್ಲಿ ಪರಿಚಯ ಪ್ರತಿಷ್ಠಾನ (ರಿ) ಪಾಂಬೂರು ಇದರ ಆಶ್ರಯದಲ್ಲಿ ಫೆ. 10 ಸೋಮವಾರದಿಂದ ಫೆ. 16 ಭಾನುವಾರ ಪರ್ಯಂತ 7 ದಿನಗಳ "ಪರಿಚಯ ರಂಗೋತ್ಸವ 2025" ಪಾಂಬೂರು ರಂಗಪರಿಚಯದಲ್ಲಿ ನಡೆಯಲಿದೆ.
ಶನಿವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಮಾಹಿತಿ ನೀಡಿದರು.
ರಂಗಪರಿಚಯದಲ್ಲಿ ಪ್ರತೀದಿನ ಸಾಯಂ ಗಂಟೆ 6.30 ರಿಂದ ಏಳು ದಿನಗಳ ಪರ್ಯಂತ ಕನ್ನಡ, ತುಳು, ಕೊಂಕಣಿ ಭಾಷೆಗಳ ಏಳು ನಾಟಕಗಳು ಪ್ರದರ್ಶನಗೊಳ್ಳಲಿವೆ. ಫೆ. 10 ಸೋಮವಾರ, ರಂಗಾಯಣ ಮೈಸೂರು ಪ್ರಸ್ತುತ ಪಡಿಸುವ ಕನ್ನಡ ನಾಟಕ "ಮೈ ಫ್ಯಾಮಿಲಿ", ಫೆ. 11 ಮಂಗಳವಾರ, ಸುಮನಸಾ ಕೊಡವೂರು, ಉಡುಪಿ ಪ್ರಸ್ತುತಪಡಿಸುವ ತುಳು ನಾಟಕ "ಈದಿ", ಫೆ. 12 ಬುಧವಾರ, ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ, ಮಂಗಳೂರು ಮತ್ತು ಅಸ್ತಿತ್ವ ಮಂಗಳೂರು ಪ್ರಸ್ತುತಪಡಿಸುವ ಕೊಂಕಣಿ ನಾಟಕ ಪಯ್ಸ್, ಫೆ. 13 ಗುರುವಾರ, ಸ್ಪಿನ್ನಿಂಗ್ ಟ್ರೇ ಥಿಯೇಟರ್ ಕಂ. ಬಿಜಾಪುರ ಪ್ರಸ್ತುತಪಡಿಸುವ ಕನ್ನಡ ನಾಟಕ "ಅನಾಮಿಕನ ಸಾವು", ಫೆ. 14. ಶುಕ್ರವಾರ, ಸಂಕಲ್ಪ, ಮೈಸೂರು ಪ್ರಸ್ತುತಪಡಿಸುವ ಕನ್ನಡ ನಾಟಕ "ಜೊತೆಗಿರುವನು ಚಂದಿರ", ಫೆ. 15. ಶನಿವಾರ, ಮಂದಾರ, ಬೈಕಾಡಿ ಪ್ರಸ್ತುತಪಡಿಸುವ ಕನ್ನಡ ನಾಟಕ "ಬೆತ್ತಲಾಟ", ಫೆ. 16 ಭಾನುವಾರ, ಕಲಾಕುಲ್, ಮಂಗಳೂರು ಪ್ರಸ್ತುತಪಡಿಸುವ ಕೊಂಕಣಿ ನಾಟಕ "ಸಾತ್ತೊ ಉಪಾದೆಸ್" ಪ್ರದರ್ಶನಗೊಳ್ಳಲಿವೆ.
ಫೆ. 10 ರಂದು ರಂಗಾಯಣ ಮೈಸೂರು ನಿರ್ದೇಶಕರಾದ ಸತೀಶ್ ತಿಪಟೂರು ಇವರಿಂದ ಉದ್ಘಾಟನೆಗೊಳ್ಳಲಿರುವ ರಂಗೋತ್ಸವವು ಫೆ. 16ರಂದು ಯಕ್ಷ ರಂಗಾಯಣ, ಕಾರ್ಕಳ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್ರವರ ಸಮಾರೋಪ ಸಂದೇಶದೊಂದಿಗೆ ಸಂಪನ್ನಗೊಳ್ಳಲಿದೆ.
ಕನ್ನಡ ನಾಟಕಗಳ ಪ್ರಾಯೋಜಕತ್ವವನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿದ್ದು, ಇದರ ಸಹಾಯಕ ನಿರ್ದೇಶಕು ಶ್ರೀಮತಿ ಪೂರ್ಣಿಮಾರವರು ಮತ್ತು ಮಾನ್ಯ ಕೆ.ಎಸ್. ಶ್ರೀಧರಮೂರ್ತಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರತೀ ನಾಟಕಗಳು 90 ರಿಂದ 120 ನಿಮಿಷಗಳ ಕಾಲ ಮಿತಿಯ ನಾಟಕಗಳಾಗಿದ್ದು, ನಿಗದಿತ ಸಮಯದಲ್ಲೇ ಕಾರ್ಯಕ್ರಮಗಳು ಪ್ರಾರಂಭವಾಗಿ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳಲಿವೆ. ಕಲಾಸಕ್ತರಿಗೆ ಮುಕ್ತ ಅವಕಾಶವಿದೆ ಎಂದು ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಹೇಳಿದ್ದಾರೆ.
ಮುಂದಿನ ಹಂತದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಾಹಿತಿ, ಜಾಗೃತಿ ಶಿಬಿರಗಳು, ಕಾರ್ಯಾಗಾರಗಳನ್ನು ನಡೆಸಲು ಒಳಾಂಗಣ ರಂಗಮಂದಿರ, ಕಲಾವಿದರಿಗೆ ವಸತಿ ವ್ಯವಸ್ಥೆ, ಇತ್ಯಾದಿಗಳನ್ನು ನಿರ್ಮಿಸುವ ಮಹತ್ತರ ಯೋಜನೆಯು ಸಂಸ್ಥೆಗಿದೆ ಎಂದರು.
ಪರಿಚಯ ಪ್ರತಿಷ್ಠಾನ ಪಾಂಬೂರು ಇದರ ಅಧ್ಯಕ್ಷ ಅನಿಲ್ ಡೇಸಾ, ಟ್ರಸ್ಟಿಗಳಾದ ವಿಲ್ಸನ್ ಡಿಸೋಜಾ, ಅರುಳ್ ಡಿಸೋಜಾ ಮತ್ತು ಪೀಠರ್ ಓಸ್ತಾ ಉಪಸ್ಥಿತರಿದ್ದರು.