ಕಾಪು ಶ್ರೀ ಹೊಸ ಮಾರಿಗುಡಿಗೆ ಶ್ರೀ ಕ್ಷೇತ್ರ ದಂಡತೀರ್ಥ ಮಠದಿಂದ ಬೃಹತ್ ಶೋಭಾಯಾತ್ರೆ
Posted On:
09-02-2025 09:22PM
ಕಾಪು : ಜೀರ್ಣೋದ್ದಾರದೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನೂತನ ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಗಂಟೆ, ಸಹಿತ ಸ್ವರ್ಣಾಭರಣಗಳ ಶೋಭಾಯಾತ್ರೆಯು ಭಾನುವಾರ ನಡೆಯಿತು.
ಕೃಷ್ಣಾಪುರ ಮಠದ ಶ್ರೀ ವಿದ್ಯಾಶ್ರೀ ಸಾಗರ ಸ್ವಾಮೀಜಿ ಸ್ವರ್ಣ ಗದ್ದುಗೆಯನ್ನು ಅನಾವರಣಗೊಳಿಸಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಪುರಮೆರವಣಿಗೆಗೆ ಚಾಲನೆ ನೀಡಿದರು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ನೇತೃತ್ವದಲ್ಲಿ ಭಕ್ತಾಧಿಗಳ ಸಹಕಾರದೊಂದಿಗೆ ಅರ್ಪಿಸಲ್ಪಟ್ಟ ಸ್ವರ್ಣ ಗದ್ದುಗೆ ಮತ್ತು ಮಾರಿಯಮ್ಮ ದೇವಿಯ ಚಿನ್ನದ ಮುಖ, ದಾನಿ ಮುಂಬಯಿಯ ಉದ್ಯಮಿ ತೋನ್ಸೆ ಆನಂದ ಎಂ. ಶೆಟ್ಟಿ ಮತ್ತು ಶಶಿರೇಖಾ ಆನಂದ ಶೆಟ್ಟಿ ಅವರು ನೀಡಿದ ಮಂಗಳೂರು ಎಸ್.ಎಲ್. ಶೇಟ್ ಜುವೆಲ್ಲರ್ಸ್ನಲ್ಲಿ ನಿರ್ಮಾಣಗೊಂಡಿರುವ ರಜತ ರಥ, ಮುಂಬಯಿ ಉದ್ಯಮಿ ಅರವಿಂದ್ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಸಮರ್ಪಿಸುವ ಅಯೋಧ್ಯೆ ಮಾದರಿಯ ಬೃಹತ್ ಗಂಟೆ, ಉಳಿಯಾರಗೋಳಿ ದಿ. ಸುಂದರ ಶೆಟ್ಟಿ ಮತ್ತು ದಿ. ರಾಧಾ ಸುಂದರ ಶೆಟ್ಟಿ ಅವರ ಮಕ್ಕಳು ಹಾಗೂ ಮೂಳೂರು ಸುಧಾಕರ ಹೆಗ್ಡೆ ಮತ್ತು ರಂಜನಿ ಸುಧಾಕರ ಹೆಗ್ಡೆ ದಂಪತಿ ಸಮರ್ಪಿಸುವ ರಾಜಗೋಪುರದ ಮಹಾದ್ವಾರದ ಬಾಗಿಲು ಹಾಗೂ ಉಚ್ಚಂಗಿ ದೇವಿಯ ಚಿನ್ನದ ಪಾದಪೀಠ ಮತ್ತು ಚಿನ್ನದ ಮುಖದ ಶೋಭಾಯಾತ್ರೆಯು ಶ್ರೀ ಕ್ಷೇತ್ರ ದಂಡತೀರ್ಥ ಮಠದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಕಾಪು ಪೇಟೆಯ ಮೂಲಕ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಸಾಗಿತು.
ಸಾವಿರಾರು ಭಕ್ತರು ಹೆದ್ದಾರಿ ಇಕ್ಕೆಲಗಳಲ್ಲಿ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.
ಮೆರವಣಿಗೆಯಲ್ಲಿ ಕುಣಿತ ಭಜನೆ, ಡೋಲು ವಾದನ, ಮಕ್ಕಳಿಂದ ಜಾಗಟೆ ಮತ್ತು ಶಂಖನಾದ, ಹುಲಿ ವೇಷ, ಮರಕಾಲು ಕುಣಿತ, ಕೀಲು ಕುದುರೆ, ಯಕ್ಷಗಾನ ನೃತ್ಯ ರೂಪಕ ಸಹಿತ ವಿವಿಧ ವೇಷಗಳು, ವಿವಿಧ ಸಮಾಜದ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ವಿ. ಸುನೀಲ್ ಕುಮಾರ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಧಾನ ತಂತ್ರಿ ಕೊರಂಗ್ರಪಾಡಿ ಕುಮಾರ ಗುರು ತಂತ್ರಿ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಾರ್ಯನಿರ್ವಹಣಾಧಿಕಾರಿ ಕೆ. ರವಿಕಿರಣ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿ ಅಧ್ಯಕ್ಷ ರವಿಸುಂದರ್ ಶೆಟ್ಟಿ, ಸ್ವರ್ಣ ಗದ್ದುಗೆ ಸಮರ್ಪಣ ಮೆರವಣಿಗೆ ಸಮಿತಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.