ಕಾಪು ಶ್ರೀ ಹೊಸ ಮಾರಿಗುಡಿ : ಹರಿದ್ವಾರದಿಂದ ಪವಿತ್ರ ಗಂಗಾಜಲ ಆಗಮನ
Thumbnail
ಕಾಪು : ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ ನಡೆಯಲಿದ್ದು, ಬ್ರಹ್ಮಕಲಶೋತ್ಸವಕ್ಕಾಗಿ ಹರಿದ್ವಾರದಿಂದ ವಿಮಾನದ ಮೂಲಕ ತರಲಾದ ಪವಿತ್ರ ಗಂಗಾಜಲವನ್ನು ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣದಿಂದ ಬೃಹತ್ ವಾಹನ ಜಾಥದ ಮೂಲಕ ಕಾಪು ಸಾವಿರ ಸೀಮೆಯ ಒಡೆಯ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು.  ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಹರಿದ್ವಾರದಲ್ಲಿ ಫೆಬ್ರವರಿ 12ರ ಕುಂಭ ಸಂಕ್ರಮಣದ ಹುಣ್ಣಿಮೆಯ ಪರ್ವಕಾಲದಲ್ಲಿ ಬೃಹತ್  ನವಕುಂಭಗಳಲ್ಲಿ ಗಂಗಾಜಲವನ್ನು ತುಂಬಿಸಿ, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಾಯಿತು. ಬೆಳಿಗ್ಗೆ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ದಂಪತಿಗಳು, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ದಂಪತಿಗಳು, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ದಂಪತಿಗಳು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಉದಯ ಸುಂದರ್ ಶೆಟ್ಟಿ ದಂಪತಿಗಳು, ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಒಂಬತ್ತು ಮಂದಿ ನವಕುಂಭದೊಂದಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಗಣ್ಯರು ನವಕುಂಭವನ್ನು ಸ್ವಾಗತಿಸಿದರು. ಮುಂದಿನ 9 ದಿನಗಳ ಕಾಲ ನವಕುಂಭಗಳಿಗೆ ವಿಶೇಷ ಪೂಜೆ ಸಲ್ಲಿಸಿ, ತದನಂತರ ಕಾಪು ಹೊಸಮಾರಿ ಗುಡಿಯ ಅಮ್ಮನ ಸನ್ನಿಧಾನಕ್ಕೆ ತರಲಾಗುವುದು. ಈ ಸಂದರ್ಭ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು, ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.
Additional image Additional image
14 Feb 2025, 07:46 PM
Category: Kaup
Tags: