ಕಾಪು : ಧರ್ಮದಿಂದಲೇ ವಿಶ್ವಕ್ಕೆ ಶಾಂತಿ - ಡಿ.ಕೆ.ಶಿವಕುಮಾರ್
Thumbnail
ಕಾಪು : ಕಾಪು ಮಾರಿಯಮ್ಮ ದೇವರ ಗದ್ದುಗೆ ಪ್ರತಿಷ್ಠಾನೆಯ ಮೊದಲ ಪ್ರಸಾದ ಸಿಕ್ಕಿದ್ದು ನನ್ನ ಭಾಗ್ಯ. ಸರಕಾರದ ಹಣವಿಲ್ಲದೆ ಭಕ್ತರು ಸ್ವ ಇಚ್ಛೆಯಿಂದ ನೀಡಿದ ಹಣದಲ್ಲಿ ಇಷ್ಟು ದೊಡ್ಡ ದೇವಳ ಕಟ್ಟಿದ್ದು ಅದ್ಭುತ. ಕಷ್ಟ ದೂರ ಮಾಡಿ, ರಕ್ಷಿಸುವ ಸನ್ನಿಧಾನ ಕಾಪು. ಇಲ್ಲಿ ಜಾತಿ ಇಲ್ಲ. ಎಲ್ಲರೂ ಮಾನವ ಜಾತಿ. ಧರ್ಮ ಎದ್ದು ಕಾಣುತ್ತಿದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಎಲ್ಲರಿಗೂ ಒಳಿತಾಗಲಿ ಎಂದು ಕರ್ನಾಟಕ ಸರಕಾರದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಅವರು ಆದಿತ್ಯವಾರ ಕಾಪು ಶ್ರೀ ಹೊಸಮಾರಿಗುಡಿಯಲ್ಲಿ ಶ್ರೀ ಮಾರಿಯಮ್ಮ ದೇವರ ಮಹಾಸ್ವರ್ಣಪೀಠದೊಂದಿಗೆ (ಗದ್ದಿಗೆ) ವ್ಯಸ್ತಾಂಗಸಮಸ್ತನ್ಯಾಸಪೂರ್ವಕ ಶ್ರೀ ಮಾರಿಯಮ್ಮನ ಪ್ರತಿಷ್ಠೆ, ಶ್ರೀ ಉಚ್ಚಂಗಿದೇವಿಯ ಸ್ವರ್ಣ ಪೀಠದೊಂದಿಗೆ ವ್ಯಸ್ತಾಂಗಸಮಸ್ತನ್ಯಾಸಪೂರ್ವಕ ಶ್ರೀ ಉಚ್ಚಂಗಿದೇವಿಯ ಪ್ರತಿಷ್ಠೆಯಲ್ಲಿ ಪಾಲ್ಗೊಂಡ ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭ ದೇವಳದ ವತಿಯಿಂದ ಡಿ.ಕೆ.ಶಿವಕುಮಾರ್ ರವರಿಗೆ ದೇವಳದ ತಂತ್ರಿವರ್ಯರು, ಪ್ರಧಾನ ಅರ್ಚಕರು ಅನುಗ್ರಹ ಪ್ರಸಾದ ನೀಡಿ, ಗೌರವಿಸಿದರು. ಡಿ.ಕೆ.ಶಿವಕುಮಾರ್ ರೂ.9,99,999ರೂ. ಮೌಲ್ಯದ ಸ್ವರ್ಣ ಲೇಪಿತ ರಜತ ಬ್ರಹ್ಮಕಲಶ ಸಮರ್ಪಿಸಿದರು. ಈ ಸಂದರ್ಭ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಪು ಹೊಸಮಾರಿಗುಡಿಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಜಯಪ್ರಕಾಶ್ ಹೆಗ್ಡೆ, ಮಾಧವ ಪಾಲನ್, ಡಾ. ಸುನೀತಾ ಶೆಟ್ಟಿ, ಮಿಥುನ್ ರೈ,ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತಿಕ್ ಬಾಯಲ್, ಕಾಪು ತಹಶಿಲ್ದಾರ್ ಡಾ.ಪ್ರತಿಭ ಆರ್.,ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಮತ್ತಿತರರು ಉಪಸ್ಥಿತರಿದ್ದರು. ಕೊರಂಗ್ರಪಾಡಿ ವೇದಮೂರ್ತಿ ಕೆ ಜಿ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ, ಕ್ಷೇತ್ರದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಕೆಪಿ. ಕುಮಾರ ಗುರು ತಂತ್ರಿಯವರ ನೇತೃತ್ವದಲ್ಲಿ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿಯವರ ಸಹಕಾರದಲ್ಲಿ ರವಿವಾರದ ಧಾರ್ಮಿಕ ವಿಧಿಗಳು ನಡೆದವು. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
Additional image Additional image
02 Mar 2025, 03:40 PM
Category: Kaup
Tags: