ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ : ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ
ಪಡುಬಿದ್ರಿ : ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಾಕಷ್ಟು ಸವಲತ್ತುಗಳು ಜನಸಾಮಾನ್ಯರಿಗೆ ಲಭ್ಯವಿದ್ದು, ಅರ್ಹ ಫಲಾನುಭವಿಗಳು ವಿವಿಧ ಇಲಾಖೆಗಳನ್ನು ಸಂಪರ್ಕಿಸಿ, ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಡುಬಿದ್ರಿ ಬೇಂಗ್ರೆಯ ಗಜಾನನ ಜ್ಞಾನ ವಿಕಾಸ ಕೇಂದ್ರದ ಮಹಿಳಾ ಸದಸ್ಯರಿಗೆ ಸರಕಾರಿ ಸವಲತ್ತುಗಳ ಕುರಿತು ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸರಕಾರವು ವಿವಿಧ ವರ್ಗಗಳಿಗಾಗಿ ವಿವಿಧ ಇಲಾಖೆ, ನಿಗಮ, ಮಂಡಳಿಗಳನ್ನು ರೂಪಿಸಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಡಾ ಸವಲತ್ತುಗಳಿಗಾಗಿ ಗ್ರಾಮ ಒನ್, ಕರ್ನಾಟಕ ಒನ್, ಸಿಎಸ್‌ಸಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಬೇಂಗ್ರೆಯ ಗಜಾನನ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಸುಶೀಲಾ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿ ಸರಿತಾ, ಭವ್ಯ, ಸೇವಾ ಪ್ರತಿನಿಧಿ ಸುನೀತಾ ಉಪಸ್ಥಿತರಿದ್ದರು. ಶಕುಂತಳ ಸ್ವಾಗತಿಸಿ, ವಂದಿಸಿದರು.
