ಪಡುಬಿದ್ರಿಯ ಏಳು ಮಾಗಣೆಯ ಪಂಚ ಸಾನಿಧ್ಯದಲ್ಲಿ ದೈವರಾಜ ಶ್ರೀ ಕೋಡ್ದಬ್ಬು ವರ್ಷಾವಧಿ ನೇಮೋತ್ಸವ
ಪಡುಬಿದ್ರಿ : ಅತ್ಯಂತ ಪುರಾತನ ಪ್ರಾಚೀನ ಮತ್ತು ದೈವಿ ಶಕ್ತಿಯ ಬಹುದೊಡ್ಡ ಶಕ್ತಿ ಕೇಂದ್ರವಾದ ಪಡುಬಿದ್ರಿಯ ಏಳು ಮಾಗಣೆಯ ಪಂಚ ಕ್ಷೇತ್ರಗಳಾದ ಬೊಗ್ಗರಿಲಚ್ಚಿಲ್ ಇಲ್ಲಿ ಮಾರ್ಚ್ 27&
ಮತ್ತು 28, ಪದ್ರದಬೆಟ್ಟುವಿನಲ್ಲಿ 28 ಮತ್ತು 29, ಸಂತೆಕಟ್ಟೆಯಲ್ಲಿ 29 ಮತ್ತು 30, ಕೊಂಕನಡ್ಪುವಿನಲ್ಲಿ ಮಾರ್ಚ್ 31 ಮತ್ತು ಎಪ್ರಿಲ್ 1 ಹಾಗೂ ಅಬ್ಬೇಡಿಯಲ್ಲಿ ಎಪ್ರಿಲ್ 1 ಮತ್ತು 2 ರಂದು ಶ್ರೀ ಕೋಡ್ದಬ್ಬು ದೈವದ ನೇಮೋತ್ಸವವು ಜರಗಲಿದೆ.
ಇನ್ನುಳಿದಂತೆ 2 ದೈವಸ್ಥಾನಗಳಾದ ಅವರಾಲು ಕೋಟೆ ಮತ್ತು ಅಂಗಡಿಬೆಟ್ಟುವಿನಲ್ಲಿ ಅತ್ಯಂತ ಭಾವನಾತ್ಮಕವಾಗಿ ಕೋಡ್ದಬ್ಬು ದೈವದ ನುಡಿದಂತೆ ಮುಂಬರುವ ದಿನಗಳಲ್ಲಿ ಪಾವಿತ್ರತ್ಯತೆಯನ್ನು ಪಡೆಯಲಿದೆ. ಈ ಬಾರಿ ಪಡುಬಿದ್ರಿಯ ಕೋಡ್ದಬ್ಬು ದೈವಸ್ಥಾನಗಳ ನೇಮೋತ್ಸವಗಳಲ್ಲಿ ಬದಲಾವಣೆ ಮಾಡಲಾಗಿದೆ. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಎಪ್ರಿಲ್ 3 ರ ನಂತರದಲ್ಲಿ ದೇವರ ಬಾಲಾಲಯ ಪ್ರತಿಷ್ಠೆ ನಡೆಯಲಿರುವುದರಿಂದ ಅದರ ಮುಂಚಿತವಾಗಿ ನೇಮೋತ್ಸವ ನಡೆಯಲಿದೆ.
ತುಳುನಾಡಿನ ದೈವಾರಾಧನೆಯ "ದೈವರಾಜ"ನೆಂಬ ಘನತೆಯುಳ್ಳ ಶ್ರೀಬಬ್ಬುಸ್ವಾಮಿ/ ಶ್ರೀಕೋಡ್ದಬ್ಬು ದೈವವೂ ಉತ್ತರದ ಬಾರ್ಕೂರಿನಿಂದ ದಕ್ಷಿಣದ ಕೇರಳ ರಾಜ್ಯದ ನಿಲೇಶ್ವರದವರೆಗು, ಪೂರ್ವಭಾಗದಲ್ಲಿ ಪಶ್ಚಿಮ ಘಟ್ಟ, ಚಿಕ್ಕಮಗಳೂರು, ಶಿವಮೊಗ್ಗ, ಸಾಗರ, ಮಡಿಕೇರಿ ಭಾಗದಲ್ಲಿಯು ಸಾವಿರಾರು ಕೋಡ್ದಬ್ಬು ದೈವ ಸಾನಿಧ್ಯಗಳನ್ನು ನಾವು ಇಂದಿಗೂ ಗಮನಿಸಿದಾಗ ಇಡೀ ತುಳುನಾಡಿನ ಗ್ರಾಮಗ್ರಾಮದ ರಕ್ಷಣೆಯ ಮಹಾಶಕ್ತಿ ತುಳುನಾಡಿನ ಶ್ರೀಕೋಡ್ದಬ್ಬು ದೈವವೇ ಸರ್ವಶ್ರೇಷ್ಠವಾದುದು ಆಗಿದೆ.
ಪಡುಬಿದ್ರಿಯ ಏಳು ಮಾಗಣೆಯಲ್ಲಿ ಏಳು ಕೋಡ್ದಬ್ಬು ದೈವಸ್ಥಾನಗಳಾದ ಅಂಗಡಿಬೆಟ್ಟು, ಸಂತೆಕಟ್ಟೆ, ಪದ್ರದಬೆಟ್ಟು, ಕೊಂಕನಡ್ಪು, ಅಬ್ಬೇಡಿ, ಬೊಗ್ಗರಿಲಚ್ಚಿಲ್, ಅವರಾಲು ಕೋಟೆಯ ಕೋಡ್ದಬ್ಬು ದೈವಸ್ಥಾನಗಳು ಪ್ರಮುಖವಾಗಿದೆ.
ಪೂರ್ವಕಾಲದ ಪದ್ಧತಿಯಂತೆ ನಡೆಯುವ ವಾರ್ಷಿಕ ಸೇವೆಯಲ್ಲಿ ಭಕ್ತರು ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
