ಉಡುಪಿ: ಪಂಚ ರಂಗಕರ್ಮಿಗಳಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ ಪ್ರದಾನ
Thumbnail
ಉಡುಪಿ : ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ವತಿಯಿಂದ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಆರನೇ ವರ್ಷದ 'ಮಲಬಾರ್ ವಿಶ್ವರಂಗ ಪುರಸ್ಕಾರ'ವನ್ನು ಐವರು ಹಿರಿಯ ರಂಗಕರ್ಮಿಗಳಿಗೆ ಬುಧವಾರ ಪ್ರದಾನ ಮಾಡಲಾಯಿತು. ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗ ನಟ, ನಿರ್ದೇಶಕ ಅರವಿಂದ ಕುಲಕರ್ಣಿ ಧಾರವಾಡ, ರಂಗ ಸಂಘಟಕ ಹಾಗೂ ನಿರ್ದೇಶಕ ಗಣೇಶ್ ಕಾರಂತ್ ಬೈಂದೂರು, ರಂಗನಟಿ, ಕಂಠದಾನ ಕಲಾವಿದೆ ಪ್ರಿಯಾ ಸರೋಜಾ ದೇವಿ ಮುಂಬೈ, ರಂಗನಟ ಪ್ರಕಾಶ್ ಜಿ. ಕೊಡವೂರು, ರಂಗನಟಿ ಮಂಜುಳಾ ಜನಾರ್ದನ್ ಮಂಗಳೂರು ಅವರಿಗೆ ಪ್ರಶಸ್ತಿ ಪತ್ರ, ಫಲಕ, ನಗದು ಹಾಗೂ ಬೆಳ್ಳಿಪದಕದೊಂದಿಗೆ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಂತ ವೈದ್ಯ ಡಾ.ವಿಜಯೇಂದ್ರ ರಾವ್, ಉದ್ಯಮಿ ಸುಗುಣ ಸುವರ್ಣ ಮಾತನಾಡಿದರು. ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ, ಮಲಬಾರ್ ಗೋಲ್ಡ್ ಉಡುಪಿ ಶಾಖೆ ಮುಖ್ಯಸ್ಥ ಹಫೀಜ್ ರೆಹೇಮನ್ ಉಪಸ್ಥಿತರಿದ್ದರು. ಯುಪಿಎಂಯ ಯುವ ಸಂಚಯದ ಬೀದಿ ನಾಟಕ ತಂಡವನ್ನು ಗೌರವಿಸಲಾಯಿತು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಸ್ವಾಗತಿಸಿದರು. ಸಂಧ್ಯಾ ಶೆಣೈ ವಂದಿಸಿದರು. ರಾಘವೇಂದ್ರ ಕವಾ೯ಲು, ಪೂಣಿ೯ಮಾ ಜನಾದ೯ನ್ , ವಿವೇಕಾನಂದ ಪಿ , ವಿದ್ಯಾಸರಸ್ವತಿ, ರೂಪಾಶೀ ಪರಿಚಯಿಸಿದರು.ರಾಜೇಶ್ ಭಟ್ ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮೊದಲು ಸ್ವಸ್ತಿಶ್ರೀ ಅವರಿಂದ ನೃತ್ಯ ಕಾರ್ಯಕ್ರಮ ಜರುಗಿತು.
28 Mar 2025, 03:30 PM
Category: Kaup
Tags: