ಬಂಟಕಲ್ಲು ಶ್ರೀಬಬ್ಬುಸ್ವಾಮಿ ನೂತನ ದೈವಸ್ಥಾನದ ಪುನರ್ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ-ನೇಮೋತ್ಸವದ ಆಮಂತ್ರಣ ಬಿಡುಗಡೆ
ಶಿರ್ವ : ಐತಿಹಾಸಿಕ ಹಿನ್ನೆಲೆ ಇರುವ ಬಂಟಕಲ್ಲು ಪೊದಮಲೆ ಪೆರಿಯಕಲದ ಪರಿಸರದಲ್ಲಿ ದೈವಸ್ಥಾನ ನಿರ್ಮಾಣ ಮಾಡುವಂತೆ ಪೂರ್ವಿಕರಿಗೆ ದೈವಗಳು ನೀಡಿದ ಪ್ರೇರಣೆಯಂತೆ ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಿ, ಬಂಟೇಶ್ವರನ ಸಾನಿಧ್ಯದ ಪಶ್ಚಿಮ ಭಾಗದಲ್ಲಿ ಶ್ರೀಬಬ್ಬುಸ್ವಾಮಿ ದೈವಸ್ಥಾನವನ್ನು ಶತಮಾನಗಳ ಹಿಂದೆಯೇ ಪ್ರತಿಷ್ಠಾಪಿಸಲಾಗಿತ್ತು. ಜೀರ್ಣಾವಸ್ಥೆಯಲ್ಲಿದ್ದ ಈ ಸಾನಿಧ್ಯದ ಬಗ್ಗೆ ಆಗಮಶಾಸ್ತ್ರ ತಂತ್ರಿಗಳಿಂದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಗ್ರಾಮದ ಅಭಿವೃದ್ಧಿ ಹಾಗೂ ಭಕ್ತರ ಶ್ರೇಯೋಭಿವೃದ್ಧಿಗಾಗಿ ಸಾನಿಧ್ಯದ ಜೀರ್ಣೋದ್ದಾರಕ್ಕೆ, ಗ್ರಾಮಸ್ಥರು ಮತ್ತು ಹತ್ತು ಸಮಸ್ತರು ಸೇರಿಕೊಂಡು ಸಮಾಲೋಚನೆ ನಡೆಸಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿ ವಾಸ್ತುತಜ್ಞರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಲಾಗಿದೆ.
ಎಪ್ರಿಲ್ 16ರಿಂದ ಎ.19ರ ಪರ್ಯಂತ ನೂತನ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನೇಮೋತ್ಸವ, ಧಾರ್ಮಿಕ ಸಭೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಂಟಕಲ್ಲು ಶ್ರೀ ಬಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಲಯದಲ್ಲಿ ಜರುಗಿತು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸಡಂಬೈಲು ಭಾಸ್ಕರ ಶೆಟ್ಟಿ ಹಾಗೂ ಹಿರಿಯರಾದ ದೇವದಾಸ್ ಜೋಗಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ಹಾಗೂ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ ಸಾನಿಧ್ಯದ ಜೀರ್ಣೋದ್ದಾರ ಕಾರ್ಯ ದೈವದ ಪ್ರೇರಣೆ ಹಾಗೂ ಸಂಕಲ್ಪದಂತೆ ಭಕ್ತರ ಹಾಗೂ ದಾನಿಗಳ ಸಹಕಾರದೊಂದಿಗೆ ಪೂರ್ಣಗೊಳ್ಳುತ್ತಿದ್ದು, ಸಾನಿಧ್ಯದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಇತ್ಯಾದಿ ಕಾರ್ಯಗಳು ಯಶಸ್ವಿಯಾಗಿ ಜರುಗುವಲ್ಲಿ ಎಲ್ಲಾ ಉಪಸಮಿತಿಗಳ ಸಂಚಾಲಕರು, ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ದೈಸ್ಥಾನದ ಗುರಿಕಾರರು ಹಾಗೂ ಸಮಿತಿಯ ಕಾರ್ಯಾಧ್ಯಕ್ಷ ಶಂಕರ ಪದಕಣ್ಣಾಯ ಮಾತನಾಡಿ, ಈವರೆಗೆ ನಡೆದ ಕಾರ್ಯಗಳು ಹಾಗೂ ಪೂರ್ವ ಸಿದ್ಧತೆಯ ಬಗ್ಗೆ ವಿವರವಾದ ಮಾಹಿತಿ ತಿಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಮರಾಯ ಪಾಟ್ಕರ್ ಮಾತನಾಡಿ, ಉಪಸಮಿತಿಗಳ ಜವಾಬ್ದಾರಿ ಹಾಗೂ ನಿರ್ವಹಣೆ, ಆಮಂತ್ರಣ ಪತ್ರಿಕೆ ವಿತರಣೆಯ ಬಗ್ಗೆ ಮಾಹಿತಿ ನೀಡಿ, ಇದೊಂದು ಊರಿನ ಜಾತ್ರೆಯಾಗಿದ್ದು ಎಲ್ಲಾ ಕಾರ್ಯಗಳಲ್ಲೂ ಸದಸ್ಯರು ಹಾಗೂ ಗ್ರಾಮಸ್ಥರು ಕೈಜೋಡಿಸಿ ಯಶಸ್ವಿಗೊಳಿಸುವಂತೆ ಕರೆಯಿತ್ತರು. ಸಹ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪ್ರಸಾದ್ ಕಾರ್ಯಕ್ರಮಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಹಿರಿಯರಾದ ಶೇಖರ ಪೂಜಾರಿ, ಮಧ್ಯಸ್ಥರು ರಾಮಕೃಷ್ಣ(ಅಪ್ಪು)ನಾಯಕ್, ಮಂಜುನಾಥ ಪಾಟ್ಕರ್, ಮಂಜುನಾಥ ಪೂಜಾರಿ, ಶ್ರೀಕ್ಷೇತ್ರ ಧ.ಗ್ರಾ.ಯೋಜನೆ ಸೇವಾನಿರತೆ ಪೂರ್ಣಿಮಾ ರಮೆಶ್ ಆಚಾರ್ಯ, ಹರೀಶ್ ಹೇರೂರು, ರವೀಂದ್ರ ಆಚಾರ್ಯ, ಸದಾನಂದ ಎಸ್, ಪ್ರಧಾನ ಅರ್ಚಕ ಸಂತೋಷ್ ಆರ್ ಉಪಸ್ಥಿತರಿದ್ದರು.
ಸುಕನ್ಯಾ ಜೋಗಿ ಪ್ರಾರ್ಥಿಸಿದರು. ಸತ್ಯಸಾಯಿ ಪ್ರಸಾದ್ ನಿರೂಪಿಸಿದರು. ದಿನೇಶ್ ಎಸ್ ವಂದಿಸಿದರು.
