ಶಿರ್ವ : ಚಿಣ್ಣರು-2025 ಉಚಿತ ಬೇಸಿಗೆ ಶಿಬಿರಕ್ಕೆ ಚಾಲನೆ
ಶಿರ್ವ : ಶಿರ್ವ ಮಹಿಳಾ ಮಂಡಲದ ವತಿಯಿಂದ ಮಹಿಳಾ ಸೌಧದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ ಮೂರು ದಿನಗಳ "ಚಿಣ್ಣರು-2025" ಉಚಿತ ಬೇಸಿಗೆ ಶಿಬಿರವನ್ನು ಗುರುವಾರ ಶಿರ್ವದ ಉದ್ಯಮಿ ಹಾಗೂ ಸಮಾಜಸೇವಕರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣ ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಇಂತಹ ಶಿಬಿರಗಳು ಸ್ಪೂರ್ತಿಯನ್ನು ನೀಡುತ್ತವೆ. ಶಿರ್ವ ಮಹಿಳಾ ಮಂಡಲ ಹಲವು ದಶಕಗಳಿಂದ ಈ ಪರಿಸರದಲ್ಲಿ ಸಂಘಟನೆಯ ಜೊತೆಗೆ ಅತ್ಯುತ್ತಮ ಸಮಾಜಮುಖಿ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪೀಟರ್ ಕೋರ್ಡ, ಹಸನ್ ಇಬ್ರಾಹಿಂ ಭಾಗವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿ ಪಿ. ಶೆಟ್ಟಿ ವಹಿಸಿ ಮಹಿಳಾ ಮಂಡಲದ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಠ್ಠಲ್ ಅಂಚನ್, ಮಹಿಳಾ ಮಂಡಲದ ಮಾಜಿ ಅಧ್ಯಕ್ಷೆ ವನಿತಾ ಕೆ.ಶೆಣೈ, ಕೋಶಾಧಿಕಾರಿ ದೀಪಾ ಶೆಟ್ಟಿ ಉಪಸ್ಥಿತರಿದ್ದರು.
ಗೌರವ ಸಲಹೆಗಾರರಾದ ಬಂಟಕಲ್ಲು ಗೀತಾ ವಾಗ್ಲೆ ಸ್ವಾಗತಿಸಿದರು. ಮಾಲತಿ ಅನಂತ ಮೂಡಿತ್ತಾಯ ಪರಿಚಯಿಸಿದರು. ಜಯಶ್ರೀ ಜಯಪಾಲ್ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಐರಿನ್ ಪಿಂಟೊ ವಂದಿಸಿದರು. ಶಿಬಿರದಲ್ಲಿ 80ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.
