ಕಾಪು : ಅಹಿಂಸಾ ಸಂದೇಶಕ್ಕಾಗಿ ಬೈಕ್ ರ್‍ಯಾಲಿ
Posted On:
23-05-2025 12:29PM
ಕಾಪು : ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು ಎಚ್ಚರಿಸುವುದಕ್ಕಾಗಿ, 12 ದಿನಗಳ ಬೈಕ್ ರ್‍ಯಾಲಿಯನ್ನು ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಮೂರು ರಾಜ್ಯಗಳಲ್ಲಿ ಮೂರು ಸಾವಿರ ಕಿಲೋಮೀಟರ್ ಬೈಕ್ ಮೂಲಕ ಈ ಸಂದೇಶ ಜಾಥಾವನ್ನು ಕೈಗೊಳ್ಳಲಿದ್ದಾರೆ ಎಂದು ವನಸುಮ ಟ್ರಸ್ಟ್ ಅಧ್ಯಕ್ಷರಾದ ಬಾಸುಮ ಕೊಡಗು ಹೇಳಿದರು.
ಅವರು ಶುಕ್ರವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜೇಸಿಐ ಉಡುಪಿ ಸಿಟಿ ಮತ್ತು ಜೇಸೀಐ ಕಟಪಾಡಿ ಈ ರ್‍ಯಾಲಿಯ ಸಂಘಟನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು, ಹಿರಿಯ ಜೇಸಿ ಬಾಸುಮ ಕೊಡಗು ಮಾರ್ಗದರ್ಶನದಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ 50 ಕ್ಕೂ ಹೆಚ್ಚು ಜೇಸೀ ಘಟಕಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ.
ಎಲ್ಲಾ ಕಡೆಗಳಲ್ಲಿ ಕೌಟುಂಬಿಕ ಮತ್ತು ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಲಾಗುತ್ತದೆ ಮತ್ತು ತಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಈ ರ್‍ಯಾಲಿಗೆ ಮೇ 25 ರಂದು ಬೆಳಿಗ್ಗೆ 7.30 ಕ್ಕೆ ಕಾಪು ಹೊಸ ಮಾರಿಗುಡಿ ಆವರಣದಲ್ಲಿ ಚಾಲನೆ ನೀಡಲಾಗುತ್ತದೆ. ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಲಾಲಾಜಿ ಮೆಂಡನ್, ಯೋಗೀಶ್ ಶೆಟ್ಟಿ ಹಾಗೂ ಕಾಪು ಪೋಲಿಸ್ ಸಬ್ ಇನ್ಸ್ಪೆಕ್ಟರ್ ತೇಜಸ್ವಿ ಇವರುಗಳು ಉಪಸ್ಥಿತರಿದ್ದು ರ್‍ಯಾಲಿಗೆ ಚಾಲನೆ ನೀಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವನಸುಮ ಟ್ರಸ್ಟ್ ಕಾವ್ಯವಾಣಿ ಕೊಡಗು, ಭಾಸ್ಕರ್ ಉದ್ಯಾವರ ಮತ್ತಿತರರು ಉಪಸ್ಥಿತರಿದ್ದರು.