ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಪುನಶ್ಚೇತನ ಕಾರ್ಯಗಾರ

Posted On: 24-05-2025 04:35PM

ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ - ಶಿಕ್ಷಕೇತರ ವೃಂದಕ್ಕೆ ಪುನಶ್ಚೇತನ ಕಾರ್ಯಗಾರವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.

ಸಮಾರಂಭದ ಉದ್ಘಾಟನೆಯನ್ನು ಸಂಚಾಲಕರಾದ ಡಾ|| ಕೆ. ಪ್ರಶಾಂತ್ ಶೆಟ್ಟಿಯವರು ನೆರವೇರಿಸಿ, ಶಿಕ್ಷಕರು ಪ್ರತಿವರ್ಷ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ತಮ್ಮನ್ನು ಪರಿಪೂರ್ಣಗೊಳಿಸುವುದರ ಜೊತೆಗೆ, ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಳಿಸಲು ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಶಾರದಾ ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶುಪಾಲರಾದ ವಿನ್ಸೆಂಟ್ ಡಿ ಕೋಸ್ಟಾ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕರು ಕೂಡಾ ಸಂಪನ್ಮೂಲ ವ್ಯಕ್ತಿಗಳೇ. ಆದರೆ ಅವರು ಪ್ರತಿನಿತ್ಯ ಕಲಿಕೆ ಮತ್ತು ಕಲಿಸುವಿಕೆಯಲ್ಲಿ ತೊಡಗಿಸಿಕೊಂಡರೆ ತಮ್ಮ ಜ್ಞಾನವೃದ್ಧಿಯನ್ನು ಮಾಡುವುದರ ಜೊತೆಗೆ ಮಕ್ಕಳ ಸರ್ವಾಂಗೀಣ ಉನ್ನತಿ ಮಾಡಬಹುದು ಹಾಗೂ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಬದಲಾವಣೆ ಸಾಧ್ಯ ಎಂಬ ಕಿವಿಮಾತನ್ನು ಹೇಳಿದರು.

ಸಮಾರಂಭದಲ್ಲಿ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಫ್ರೇಂಕಿ ಮಸ್ಕರೇನ್ಹಸ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ರಾಜಲಕ್ಷ್ಮೀ ರಾವ್ ಉಪಸ್ಥಿತರಿದ್ದರು. ಪ್ರಾಂಶುಪಾಲ ನೀಲಾನಂದ್ ನಾಯ್ಕ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್ ವಂದಿಸಿದರು. ಈ ಕಾರ್ಯಕ್ರಮವನ್ನು ಶಿಕ್ಷಕ ಉದಯ ಕುಮಾರ್ ನಿರೂಪಿಸಿದರು.