ಬಂಟಕಲ್ಲು : 8ನೇ ವರ್ಷದ "ಗಾದಂತ್ ಕ್ಹೇಳ್ ಮೇಳ್" - ಕೆಸರು ಗದ್ದೆ ಕ್ರೀಡೋತ್ಸವ ಸಂಪನ್ನ
ಶಿರ್ವ : ಪ್ರಕೃತಿಯ ಜೊತೆಗಿನ ಬಾಂಧವ್ಯದೊಂದಿಗೆ ಜೊತೆಯಾದ ಹಿರಿಯರ ಅನುಭವಗಳು, ಕಷ್ಟದ ಶ್ರಮ ಜೀವನ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಇಂದು ಮರೆಯಾಗುತ್ತಿದೆ. ಅವರ ಬದುಕು ನಮಗೆ ಆದರ್ಶವಾಗಿರಬೇಕು. ಹಿರಿಯರ ಕೃಷಿ ಸಂಸ್ಕೃತಿ, ಪ್ರಕೃತಿಯ ನಂಟು ನವಪೀಳಿಗೆಗೆ ಪರಿಚಯಿಸುವ "ಗಾದಂತ್ ಕ್ಹೇಳ್ ಮೇಳ್" ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ಇದರ ನಿರ್ದೇಶಕರಾದ ಎಳ್ಳಾರೆ ಸದಾಶಿವ ಪ್ರಭು ನುಡಿದರು.
ಅವರು ರವಿವಾರ ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದದ ಆಶ್ರಯದಲ್ಲಿ ಹಾಗೂ ಶ್ರೀದುರ್ಗಾ ಮಹಿಳಾ ವೃಂದದ ಸಹಭಾಗಿತ್ವದಲ್ಲಿ ಸಡಂಬೈಲು ಅನಂತರಾಮ ವಾಗ್ಲೆಯವರ ದೊಡ್ಡಗದ್ದೆಯಲ್ಲಿ ಸಮಾಜದ ಸಂಘಟನೆ, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಮನೋರಂಜನೆಯ ಸದುದ್ದೇಶದಿಂದ ಸಮಾಜ ಬಾಂಧವರಿಗಾಗಿ ಏರ್ಪಡಿಸಿದ 8ನೇ ವರ್ಷದ "ಗಾದಂತ್ ಕ್ಹೇಳ್ ಮೇಳ್" - ಕೆಸರು ಗದ್ದೆ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಗತಿಪರ ಕೃಷಿಕೆ ಸಡಂಬೈಲು ಹೆಬ್ಬಾಗಿಲು ಸುನೀತಾ ಕೃಷ್ಣ ವಾಗ್ಲೆ ಮತ್ತು ಮೂಲತ: ಕೃಷಿಕರಾಗಿದ್ದು ಪ್ರಸ್ತುತ ಇನ್ನಂಜೆ ಎಸ್‌ವಿಎಚ್ ಪ.ಪೂ.ಕಾಲೇಜಿನ ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ ಕುಂಜರ್ಗ ರಾಜೇಂದ್ರ ಪ್ರಭು, ಕಂಬಳ ಕೋಣಗಳ ಯಜಮಾನ ಮೂಡುಬೆಳ್ಳೆ ಜಡ್ಡು ಉಮೇಶ್ ನಾಯಕ್ ರವರನ್ನು ಸನ್ಮಾನಿಸಲಾಯಿತು. ಜೊತೆಗೆ ಕಂಬಳ ಕೋಣಗಳನ್ನು ಗದ್ದೆಗೆ ಇಳಿಸಿ ಸಹಕರಿಸಿದ ಸಹಪಾಠಿಗಳನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಾರಸ್ವತ ಸೌಹಾರ್ದ ಸಹಕಾರಿ ಸಂಘ (ನಿ.) ಮಣಿಪಾಲ ಇದರ ಅಧ್ಯಕ್ಷ ವಾಸುದೇವ ಕೃಷ್ಣ ನಾಯಕ್ ಸ್ಪರ್ಧಾ ವಿಜೇಜೇತರಿಗೆ ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.
ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದ ಬೈಲು, ಸ್ಥಳೀಯ ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಗದ್ದೆಯ ಯಜಮಾನ ಅನಂತರಾಮ ವಾಗ್ಲೆ, ಆರ್‌ಎಸ್‌ಬಿ ಸೇವಾ ವೃಂದದ ಅಧ್ಯಕ್ಷ ಕೆ.ಆರ್ ಪಾಟ್ಕರ್, ಶ್ರೀದುರ್ಗಾ ಮಹಿಳಾ ಮಹಿಳಾ ವೃಂದದ ಅಧ್ಯಕ್ಷೆ ಸುನೀತಾ ದೇವೇಂದ್ರ ನಾಯಕ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ ಬಾಂದೇಲ್ಕರ್, ಬೆಳ್ಳೆ ಗ್ರಾ,ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ ಗದ್ದೆಗೆ ಹಾಲು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶೇಷ ಆಕರ್ಷಣೆಯಾಗಿ ಕೆಸರುಗದ್ದೆಯಲ್ಲಿ ಮೂಡುಬೆಳ್ಳೆ ಜಡ್ಡು ಉಮೇಶ್ ನಾಯಕ್‌ರವರ ಕಂಬಳದ ಕೋಣಗಳ ಓಟವನ್ನು ಪ್ರದರ್ಶಿಸಲಾಯಿತು.
ಕೆಸರು ಗದ್ದೆಯಲ್ಲಿ ನಿಧಿ ಶೋಧ, ಮಕ್ಕಳಿಗೆ ಕೆಸರುಗದ್ದೆ ಓಟ, ಅಡಿಕೆ ಹಾಳೆ ಓಟ, ಚೆಂಡು ಹೆಕ್ಕುವುದು, ಹಲಸಿನ ಬೀಜ ಹೆಕ್ಕುವುದು, ಪ್ರೌಢರಿಗೆ ತಂಡಗಳಲ್ಲಿ ಕಂಬಳ ಓಟ, ರಿಲೇ, ಗೂಟಕ್ಕೆ ಸುತ್ತುಹಾಕಿ ಓಟ, ಬಲೂನ್ ಓಟ, ಹಿರಿಯರಿಗೆ ದಂಪತಿ ಉಪ್ಪುಮೂಟೆ ಓಟ, ಕಂಬಳ ಓಟ, ರಿಲೇ ಓಟ, ಮಡಲು ಹೆಣೆಯುವುದು, ಬೈಹುಲ್ಲಿನಿಂದ ಹಗ್ಗ ತಯಾರಿ, ಬಲೂನ್ ಓಟ, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಆಟಗಳನ್ನು ಏರ್ಪಡಿಸಲಾಗಿತ್ತು.
ಪ್ರಧಾನ ಸಂಘಟಕ ಸೇವಾ ವೃಂದದ ಅಧ್ಯಕ್ಷ ಕೆ.ಆರ್ ಪಾಟ್ಕರ್ ಪ್ರಾಸ್ತಾವನೆಗೈದು, ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ಸ್ಫರ್ಧಾ ವಿಜೇತರನ್ನು ಪರಿಚಯಿಸಿದರು. ದೇವದಾಸ್ ಪಾಟ್ಕರ್ ನಿರೂಪಿಸಿದರು.
