ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಆಟಿದ ಲೇಸ್ ಕಾರ್ಯಕ್ರಮ

Posted On: 20-07-2025 04:28PM

ಪಡುಬಿದ್ರಿ : ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಮಹಿಳಾ ಸ್ವಸಹಾಯ ಗುಂಪಿನ ಆಶ್ರಯದಲ್ಲಿ ಪಡುಬಿದ್ರಿ ಬಿಲ್ಲವ ಸಂಘದ ಸಭಾಂಗಣದಲ್ಲಿ ಜರಗಿದ ಆಟಿದ ಲೇಸ್ ಕಾರ್ಯಕ್ರಮವನ್ನು ಜಾನಪದ ಚಿಂತಕ ವಾಮನ ಕೋಟ್ಯಾನ್ ನಡಿಕುದ್ರುರವರು ಕಳಸಕ್ಕೆ ಭತ್ತ ತುಂಬುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಅಂದು ಆಟಿಯು ಕಷ್ಟದ ಕಾಲವಾಗಿತ್ತು. ಅವಿಭಕ್ತ ಕುಟುಂಬದಲ್ಲಿಯ ಒಡನಾಟದ ಜೊತೆಗೆ ಕೃಷಿ ಬದುಕಿನ ಅನಾವರಣದ ನೆನಪು ಅಜರಾಮರ. ಇಂದು ಆಟಿಯು ವೈಭವೀಕರಣವಾಗಿದೆ. ಹಾಳೆಯ ಮುಟ್ಟಾಲೆಯಿಂದ ಹಿಡಿದು ಬಳಸುವ ಪರಿಕರಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ. ಆಟಿಯ ಆಹಾರಗಳು ದೈಹಿಕ ವ್ಯವಸ್ಥೆಗೆ ಶಕ್ತಿದಾಯಕವಾಗಿತ್ತು ಎಂದರು.

ಪಡುಬಿದ್ರಿ ಸಿ.ಎ.ಸೊಸೈಟಿ ನಿರ್ದೇಶಕ ಗಿರೀಶ್ ಪಲಿಮಾರು ಮಾತನಾಡಿ, ಪ್ರಸ್ತುತ ಆಟಿ ಎಲ್ಲಾ ಕಡೆ ಜರಗುತ್ತಿದೆ. ಆದರೆ ಅಂದಿನ ವಾಸ್ತವಿಕತೆಯನ್ನು ನೆನಪಿಸಿ ಯುವ ಜನಾಂಗಕ್ಕೆ ತಿಳಿಸುವ ಕಾರ್ಯವಾಗಬೇಕಿದೆ. ಕೃಷಿ ಕಾರ್ಯ ಮುಗಿದು ಮನೆ ತುಂಬಾ ಜನರಿದ್ದ ಸಂದರ್ಭದಲ್ಲಿ ಊಟಕ್ಕೂ ತತ್ವಾರದಲ್ಲಿದ್ದ ಸಮಯ ಪ್ರಕೃತಿದತ್ತವಾಗಿ ಸಿಗುತ್ತಿದ್ದ ವಸ್ತುಗಳನ್ನು ಆಹಾರಕ್ಕಾಗಿ ಬಳಸುತ್ತಿದ್ದ ಕಾಲ. ಆಟಿಯ ಸಮಯ ವಿವಿಧ ಪರಿಕರಗಳನ್ನು ತಯಾರಿಸುತ್ತಿದ್ದು, ವಕ್೯ ಫ್ರಮ್ ಹೋಮ್ ಪರಿಕಲ್ಪನೆ ಅಂದೂ ಇತ್ತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಮಾತನಾಡಿ, ಕೊರೋನಾದ ಬಳಿಕ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಮೂಡಿದೆ. ಆಟಿಯ ತಿಂಡಿ ತಿನಿಸುಗಳು ಹಲವಾರು ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದರು.

ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಬಿಲ್ಲವ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಆನಂದ್, ನಾರಾಯಣಗುರು ಸೇವಾದಳದ ದಳಪತಿ ಸಂತೋಷ್ ನಂದಿಕೂರು, ಬಿಲ್ಲವ ಸಂಘದ ಉಪಾಧ್ಯಕ್ಷ ರವಿ ಸಾಲ್ಯಾನ್, ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಕೋಶಾಧಿಕಾರಿ ಅಶೋಕ್ ಪೂಜಾರಿ ವೇದಿಕೆಯಲ್ಲಿದ್ದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಮತ್ತು ಕಲ್ಪತರು ಮಹಿಳಾ ಸ್ವಸಹಾಯ ಗುಂಪಿನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸುಜಾತ ಹರೀಶ್ ಪ್ರಾರ್ಥಿಸಿದರು. ರೋಹಿಣಿ ಆನಂದ್ ಸ್ವಾಗತಿಸಿದರು. ಸುಚರಿತ ಎಲ್ ಅಮೀನ್ ನಿರೂಪಿಸಿ, ತೇಜಾವತಿ ವಂದಿಸಿದರು. ಸುಗಂಧಿ ಶ್ಯಾಮ್ ಆಟಿಯ ಕವನ ವಾಚಿಸಿದರು. ಮಹಿಳೆಯರಿಂದ ನೃತ್ಯ ಕಾರ್ಯಕ್ರಮ ಜರಗಿತು. ಸುಮಾರು 26 ಬಗೆಯ ಆಟಿ ಆಹಾರ ಖಾದ್ಯಗಳನ್ನು ಉಣಬಡಿಸಲಾಯಿತು.