ಕಾಪು ದಂಡತೀರ್ಥ ವಿದ್ಯಾಸಂಸ್ಥೆ : ಶಿಕ್ಷಕ - ರಕ್ಷಕ ಸಂಘದ ಮಹಾಸಭೆ
Posted On:
24-08-2025 11:27AM
ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯ ಶಿಕ್ಷಕ - ರಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಕಾಲೇಜಿನ ಸಭಾಭವನದಲ್ಲಿ ಶನಿವಾರ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕ ಡಾ|| ಕೆ. ಪ್ರಶಾಂತ್ ಶೆಟ್ಟಿಯವರು, ಶಿಕ್ಷಕ -ರಕ್ಷಕ ಸಂಘವು ಯಾವುದೇ ವಿದ್ಯಾಸಂಸ್ಥೆಗೆ ಬೆನ್ನೆಲುಬಾಗಿದ್ದು, ಮಕ್ಕಳ ಪ್ರಗತಿಯಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಆಡಳಿತ ಮಂಡಳಿಯ ಜೊತೆಗೆ ಅತ್ಯುತ್ತಮ ಸಲಹೆ ಸೂಚನೆಗಳು ಹೆತ್ತವರಿಂದ ದೊರಕಿದಾಗ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳು ದೊರಕುತ್ತದೆ ಹಾಗೂ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಮೂಡಿಬರಲು ಕಾರಣರಾದ ಹೆತ್ತವರ ಸಹಕಾರಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಮಂಜುಳಾ ಆರ್. ಶೆಟ್ಟಿಯವರು ಮಾತನಾಡಿ, ಪ್ರೌಢ ಮತ್ತು ಪದವಿಪೂರ್ವ ವಿಭಾಗದ 2025 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕದೊಂದಿಗೆ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಗೌರವಿಸಿ, ಈ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುವ ಯೋಗ ನನ್ನದಾಯಿತು ಹಾಗೂ ತಮ್ಮೆಲ್ಲರ ಸಹಕಾರದಿಂದ ನನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ ಎಂಬ ಹೆಮ್ಮೆ ನನಗಿದೆ ಎಂದರು.
ಹೆತ್ತವರನ್ನು ಉದ್ದೇಶಿಸಿ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಗೇಬ್ರಿಯಲ್ ಮಸ್ಕರೇನ್ಹಸ್ ಮಾತನಾಡಿದರು.
ಪ್ರಾಂಶುಪಾಲ ನೀಲಾನಂದ್ ನಾಯ್ಕ್ ಗತ ಸಭೆಯ ವರದಿ ಮತ್ತು ಫಲಿತಾಂಶ ವಿಶ್ಲೇಷಣೆಯನ್ನು ಮಾಡಿದರು. ಕೋಶಾಧಿಕಾರಿ ಶಿವಣ್ಣ ಬಾಯರ್ ಲೆಕ್ಕ ಪತ್ರವನ್ನು ಮಂಡಿಸಿದರು.
ವಿದ್ಯಾರ್ಥಿಗಳಾದ ರಿತಿಕಾ ಆರ್. ಶೆಟ್ಟಿ, ಮೊಹಮ್ಮದ್ ಅಫ್ನಾನ್, ದಿವ್ಯಲಕ್ಷ್ಮೀ, ಶ್ರೀಪ್ರದಾ ಎಸ್. ಬಾಯರ್, ಸಾನಿಧ್ಯ ವಿ. ಶೆಟ್ಟಿ ಇವರನ್ನು ಉಪನ್ಯಾಸಕಿ ಸುಮನ ಇವರು ಪರಿಚಯಿಸಿದರು.
ಪ್ರಾಥಮಿಕ ವಿಭಾಗದ ಶಕುಂತಳಾ ಬಿ. ಮತ್ತು ಪ್ರೌಢ ಹಾಗೂ ಕಾಲೇಜು ವಿಭಾಗದ ಹಸನಬ್ಬ ಇವರು ರಕ್ಷಕ - ಶಿಕ್ಷಕ ಸಂಘದ ನೂತನ ಅಧ್ಯಕ್ಷರುಗಳಾಗಿ ಆಯ್ಕೆಗೊಂಡರು.
ರಸಾಯನಶಾಸ್ತ್ರ ಉಪನ್ಯಾಸಕ ಸುರಥ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಕವಿತಾ ವಂದಿಸಿದರು.