ಸೆ.12 : ಬೆಳಪು ಗ್ರಾಮ ಪಂಚಾಯತ್ ಗೆ ಆರ್.ಬಿ.ಐ ನಿರ್ದೇಶಕರ ತಂಡ ಭೇಟಿ
ಕಾಪು : ಬೆಳಪು ಗ್ರಾಮ ಪಂಚಾಯತಿಗೆ ಸೆ.12 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಭಾರತ ಸರಕಾರದ ಆರ್.ಬಿ.ಐ ನಿರ್ದೇಶಕರಾದ ಸೋನಾಲಿ ಸೇನ್ ಗುಪ್ತ, ಆರ್.ಬಿ.ಐ ಬೆಂಗಳೂರು ಎ.ಜಿ.ಎಂ ಅರುಣ್ ಕುಮಾರ್. ಯೂನಿಯನ್ ಬ್ಯಾಂಕಿನ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್ ಹಾಗೂ ಯೂನಿಯನ್ ಬ್ಯಾಂಕ್ ನ ರೀಜನಲ್ ಮ್ಯಾನೇಜರ್ ಅಶೋಕ್ ಕುಮಾರ್. ಲೀಡ್ ಬ್ಯಾಂಕ್ ಮ್ಯಾನೇಜರ್, ಕೆನರಾ ಬ್ಯಾಂಕ್ ಹರೀಶ್ ಜಿ. ಯೂನಿಯನ್ ಬ್ಯಾಂಕ್ ಡೆಪ್ಯೂಟಿ ರೀಜನಲ್ ಮುಖ್ಯಸ್ಥ ಸತ್ಯ ಬ್ರತೋ ಭಾದುರಿರವರ ಉನ್ನತ ಮಟ್ಟದ ತಂಡ ಪಂಚಾಯತ್ ಮಟ್ಟಕ್ಕೆ ಪ್ರಥಮವಾಗಿ ಬೆಳಪು ಗ್ರಾಮವನ್ನು ಆಯ್ಕೆ ಮಾಡಿ ಭೇಟಿ ನೀಡಲಿದ್ದಾರೆಂದು ಬೆಳಪು `ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ|ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಬೆಳಪು ಗ್ರಾಮದ ಅಭಿವೃದ್ಧಿ ಯೋಜನೆಗಳು ಗ್ರಾಮೀಣ ಭಾಗದ ಜನರ ಆರ್ಥಿಕ ಸಬಲೀಕರಣ, ಭಾರತ ಸರಕಾರದಿಂದ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಬ್ಯಾಂಕಿನಿಂದ ದೊರಕುವ ಸವಲತ್ತು ಬಳಸಿರುವ ಬಗ್ಗೆ, ವಿದ್ಯಾರ್ಥಿಗಳಿಗೆ ಬ್ಯಾಂಕಿನ ಸೌಲಭ್ಯ, ಗ್ರಾಮೀಣ ಕೈಗಾರಿಕೆಗಳಿಗೆ ರೈತರಿಗೆ, ಕೂಲಿ ಕಾರ್ಮಿಕರಿಗೆ ಭಾರತ ಸರಕಾರದ ಆಯುಷ್ಮಾನ್ ಅನುಷ್ಠಾನದ ಬಗ್ಗೆ, ಬ್ಯಾಂಕಿನ ಸಾಲ ಸೌಲಭ್ಯದ ಯೋಜನೆಯ ಕುರಿತು ನೇರವಾಗಿ ಸಮಾಲೋಚನೆ ನಡೆಸಬಹುದೆಂದರು.
ಒಂದು ಗ್ರಾಮಕ್ಕೆ ಭಾರತ ಸರಕಾರದ ಅತ್ಯುನ್ನತ ಹಣಕಾಸು ಸಂಸ್ಥೆ ಆರ್.ಬಿ.ಐ ನಿರ್ದೇಶಕರ ತಂಡ ಭೇಟಿ ನೀಡಿ ಆರ್ಥಿಕ ಪ್ರಗತಿಯ ಪರಿಶೀಲನೆ ನಡೆಸುವುದು ನಮಗೆಲ್ಲ ಹೆಮ್ಮೆ ಎನಿಸಿದೆ. ಆರ್.ಬಿ.ಐ ನಡೆ ಹಳ್ಳಿ ಕಡೆ ನಿಜಕ್ಕೂ ಒಂದು ಸೌಭಾಗ್ಯ. ಇದರಿಂದ ಗ್ರಾಮೀಣ ಜನರಿಗೆ ಬ್ಯಾಂಕಿನ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಲು ಮತ್ತು ಆಗುತ್ತಿರುವ ಸಮಸ್ಯೆಗೆ ನೇರ ಪರಿಹಾರ ಕಂಡುಕೊಳ್ಳಬಹುದೆಂದು ಇದರ ಪ್ರಯೋಜನ ಸಾರ್ವಜನಿಕರು ಪಡೆದುಕೊಳ್ಳುವಂತೆ ಬೆಳಪು ಪಂಚಾಯತ್ ಅಧ್ಯಕ್ಷರು ವಿನಂತಿಸಿಕೊಂಡಿದ್ದಾರೆ.
