ಸೆ. 21 : ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಗುರು ಸಂದೇಶ ಸಾಮರಸ್ಯ ಜಾಥಾ 2025
ಉಡುಪಿ: ಒಂದೇ ಜಾತಿ ಒಂದೇ ಮತ ಒಬ್ಬರೇ ದೇವರು ಎಂಬ ವಿಶ್ವಗುರುವಿನ ಸಾರ್ವಕಾಲಿಕ ಸತ್ಯ ಸಂದೇಶ ಸಾರಿದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿಯ ಹರಿಕಾರ, ಸಮಾಜ ಸುಧಾರಣೆಯ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೆ.21,ಆದಿತ್ಯವಾರದಂದು ಉಡುಪಿ ಜಿಲ್ಲಾ ಯುವ ವೇದಿಕೆಯ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬಿಲ್ಲವ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಗುರು ಸಂದೇಶ ಸಾಮರಸ್ಯ ಜಾಥಾ 2025 ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಹೇಳಿದರು.
ಅವರು ಉಡುಪಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗುರು ಸಂದೇಶ ಸಾಮರಸ್ಯ ಜಾಥವು ಬನ್ನಂಜೆ ಜಯಲಕ್ಷ್ಮೀ ಎದುರುಗಡೆಯಿಂದ ಪ್ರಾರಂಭಗೊಂಡು ನಮ್ಮ ಸಮಾಜದ ದಕ್ಷ ಮಹಿಳಾ ಪೊಲೀಸ್ ಅಧಿಕಾರಿ ರೀನಾ ಸುವರ್ಣ ಮತ್ತು ಕರಾವಳಿಯ ನಿಷ್ಠೆಯ ದೈವಾರಾಧಕರಾದ ದೈವ ನರ್ತಕ ರವಿ ಪಡ್ಡಂರವರು ಗುರು ಸಂದೇಶ ಸಾಮರಸ್ಯ ರಥಕ್ಕೆ ಚಾಲನೆ ನೀಡಲಿದ್ದಾರೆ.
ಗುರು ಸಂದೇಶ ಸಾಮರಸ್ಯ ಜಾಥಾದ ಮುಖ್ಯ ಅತಿಥಿಗಳಾಗಿ ಸಂಸದರು, ಶಾಸಕರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಉಡುಪಿ ಪರಿಸರದ ಎಲ್ಲಾ ಬಿಲ್ಲವ ಸಂಘ ಸಂಸ್ಥೆಗಳ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ.
ಜಾಥಾವು ಬನ್ನಂಜೆ ಜಯಲಕ್ಷ್ಮಿ ಎದುರುಗಡೆಯಿಂದ ಸಿಟಿ ಬಸ್ ಸ್ಟ್ಯಾಂಡ್ - ಕೋರ್ಟ್ ರೋಡ್ - ಮಿಷನ್ ಕಾಂಪೌಂಡ್, ಮಹಿಷಮರ್ದಿನಿ ದೇವಸ್ಥಾನ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಅಲೆವೂರು, ರಾಂಪುರ, ದೆಂದೂರ್ ಕಟ್ಟೆ, ಮಣಿಪುರ ಆಗಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ.
ಈ ಸೌಹಾರ್ದ ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಬಾಂಧವರು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಾರಾಯಣ ಗುರುಗಳ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಸಂದೇಶ ಸಾಮರಸ್ಯ ಜಾಥವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕು ಎಂದವರು ಮನವಿ ಮಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಸುಧಾಕರ್ ಡಿ ಅಮೀನ್, ದಿವಾಕರ್ ಸನಿಲ್, ವಿಜಯ್ ಉದ್ಯಾವರ, ಮಹೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.
