ಅ.5 : ಸಿರಿಮುಡಿ ದತ್ತಿನಿಧಿ ವಿತರಣೆ ಮತ್ತು ಸಿರಿಮುಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪಡುಬಿದ್ರಿ ಉದ್ಘಾಟನಾ ಸಮಾರಂಭ New
Posted On:
01-10-2025 12:55PM
ಪಡುಬಿದ್ರಿ : ಬಂಟರ ಸಂಘ (ರಿ.)ಪಡುಬಿದ್ರಿ, ಬಂಟ್ಸ್ ವೆಲ್ವೇರ್ ಟ್ರಸ್ಟ್ (ರಿ.)ಪಡುಬಿದ್ರಿ ಹಾಗೂ ಸಿರಿಮುಡಿ ದತ್ತಿನಿಧಿ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ.) ಪಡುಬಿದ್ರಿ ಇದರ ಸಹಭಾಗಿತ್ವದಲ್ಲಿ ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಿಧವೆಯರಿಗೆ, ವಿಶಿಷ್ಟ ಚೇತನರಿಗೆ, ಅಶಕ್ತರಿಗೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯಧನ ವಿತರಣೆ, ದಾನಿಗಳಿಗೆ ಸನ್ಮಾನ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯತೆಗಳನ್ನೊಳಗೊಂಡ ಸಿರಿಮುಡಿ ದತ್ತಿ ನಿಧಿ ವಿತರಣಾ ಸಮಾರಂಭ ಹಾಗೂ ಸಿರಿಮುಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಪಡುಬಿದ್ರಿ ಇದರ ಉದ್ಘಾಟನಾ ಸಮಾರಂಭ ಅ.5, ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ಪಡುಬಿದ್ರಿ ಬಂಟರ ಭವನದ ದಿ.ರಮೇಶ್ ಮಹಾಬಲ ಶೆಟ್ಟಿ ಸಭಾಂಗಣದಲ್ಲಿ ಜರಗಲಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪುರವರು ತಿಳಿಸಿದ್ದಾರೆ.
ಅವರು ಪಡುಬಿದ್ರಿ ಬಂಟರ ಸಂಘದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಡುಬಿದ್ರಿ ಬಂಟರ ಸಂಘದ ಪೂರ್ವಾಧ್ಯಕ್ಷರಾದ ಸಾಂತೂರು ಭಾಸ್ಕರ ಶೆಟ್ಟಿಯವರ ವಿಶೇಷ ಮುತುವರ್ಜಿಯಿಂದ ಸಂಘದ ಸದಸ್ಯರಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ಪ್ರಾರಂಭಿಸಿದ ಸಿರಿಮುಡಿ ದತ್ತಿನಿಧಿ ಅವರ ಪರಿಶ್ರಮದಿಂದ 1.31 ಕೋಟಿ ಬ್ಯಾಂಕ್‌ನಲ್ಲಿ ಠೇವಣಿಯಾಗಿರಿಸಿ, ಪ್ರತೀವರ್ಷ ಅದರ ಬಡ್ಡಿಯಿಂದ ಆರ್ಥಿಕ ಸಹಕಾರವನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಬಂಟ್ಸ್ ವೆಲ್ವೇರ್ ಟ್ರಸ್ಟ್ (ರಿ.) ಕೂಡ ಕೈ ಜೋಡಿಸುತ್ತಿದ್ದು ಪ್ರಸ್ತುತ ವರ್ಷ ಸುಮಾರು 17 ಲಕ್ಷ ರೂಪಾಯಿಗಳ ಸಹಾಯಧನ ವಿತರಣೆ ನಡೆಯಲಿದೆ.
ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) ಪಡುಬಿದ್ರಿ ಶುಭಾರಂಭ : ಬಂಟ ಸಮಾಜ ಹಾಗೂ ಇತರ ಸಮಾಜಗಳ ಆರ್ಥಿಕ ಸಬಲೀಕರಣಕ್ಕಾಗಿ ಗ್ರಾಹಕಸ್ನೇಹಿ ಬ್ಯಾಂಕ್ ರೂಪಿಸಬೇಕು ಎನ್ನುವ ಸಾಮಾಜಿಕ ಕಳಕಳಿಯ ಹಂಬಲವನ್ನು ಹೊಂದಿ ಸುಮಾರು 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತನ್ನದೇ ಆದ ಸ್ವಂತ ಕಟ್ಟಡದಲ್ಲಿ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆಯೊಂದಿಗೆ ಕಾರ್ಯಾಚರಿಸಲು ಸಿರಿಮುಡಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) ಸಿದ್ದವಾಗಿದೆ. ಬಂಟ ಸಮಾಜದ ಉದ್ಯಮಿ, ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಕೆ.ಶೆಟ್ಟಿಯವರು ಸೊಸೈಟಿ ಸ್ಥಾಪನೆಯಲ್ಲಿ ಮಹತ್ವದ ಸಹಕಾರವನ್ನು ನೀಡಿದ್ದಾರೆ. ಸಂಪೂರ್ಣ ಹವಾ ನಿಯಂತ್ರಿತ ಕಟ್ಟಡದಲ್ಲಿ ಕಾರ್ಯಾಚರಿಸಲಿದೆ. ಜೊತೆಗೆ ಸೇಫ್ ಲಾಕರ್ ಸೌಲಭ್ಯವನ್ನು ಕೂಡ ಹೊಂದಿದೆ. ಬ್ಯಾಂಕಿನ ಕಟ್ಟಡವು "ಸದಾನಂದ ಕುಡ್ಡು ಶೆಟ್ಟಿ ಸಂಕೀರ್ಣ" ಎಂಬ ನಾಮಾಂಕಿತವನ್ನು ಹೊಂದಿದೆ. ಇದು ಬಂಟರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮವಾಗಿ ಸ್ವಂತ ಕಟ್ಟಡವನ್ನು ಹೊಂದಿದ ಕೋ-ಅಪರೇಟಿವ್ ಸೊಸೈಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.
ಅ.5ರಂದು ಬಂಟರ ಮಾಹಿತಿ ಕೈಪಿಡಿಯ ಬಿಡುಗಡೆ, ಸಂಗೀತ ರಸದೌತಣ, ಪಡುಬಿದ್ರಿ ಬಂಟರ ಸಂಘದ ಸದಸ್ಯರಿಂದ ಮನರಂಜನೆಯು ಇರಲಿದೆ.
ಸಿರಿಮುಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಉದ್ಘಾಟನೆಯನ್ನು 'ಸಹಕಾರ ರತ್ನ' ಡಾ.ಎಂ.ಎನ್.ರಾಜೇಂದ್ರ ಕುಮಾರ್‌ರವರು ನೆರವೇರಿಸಲಿದ್ದಾರೆ. ಸದಾನಂದ ಕುಡ್ಡು ಶೆಟ್ಟಿ ಸಂಕೀರ್ಣವನ್ನು ಉದ್ಯಮಿ ಸದಾನಂದ ಕೆ. ಶೆಟ್ಟಿಯವರು ಉದ್ಘಾಟಿಸಲಿದ್ದಾರೆ. ಸಿರಿಮುಡಿ ದತ್ತಿ ನಿಧಿ ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಆರ್.ಜಿ.ಗ್ರೂಪ್‌ನ ಆಡಳಿತ ನಿರ್ದೇಶಕ ಡಾ.ಕೆ.ಪ್ರಕಾಶ್ ಶೆಟ್ಟಿಯವರು ನೆರವೇರಿಸಲಿದ್ದಾರೆ. ಸಿರಿಮುಡಿ ಉಳಿತಾಯ ಖಾತೆಯ ಪಾಸ್ ಪುಸ್ತಕದ ವಿತರಣೆಯನ್ನು ಹೇರಂಭ ಗ್ರೂಪ್‌ನ ಆಡಳಿತ ನಿರ್ದೇಶಕರಾದ ಡಾ.ಕನ್ಯಾನ ಸದಾಶಿವ ಶೆಟ್ಟಿಯವರು ಮಾಡಲಿದ್ದಾರೆ. ವಿ.ಕೆ.ಗ್ರೂಪ್ ಆಡಳಿತ ನಿರ್ದೇಶಕ ಕೆ.ಎಂ.ಶೆಟ್ಟಿಯವರು ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಪುಣೆ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆಯವರು ಸವಲತ್ತುಗಳ ವಿತರಣೆ ಮಾಡಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ.ದೇವಿಪ್ರಸಾದ್ ಶೆಟ್ಟಿಯವರು ವಹಿಸಲಿದ್ದಾರೆ.
ಡಿಸೆಂಬರ್ ನಲ್ಲಿ ಬಂಟಾಶ್ರಯ-ಕುಟುಂಬ ಸೇವಾಶ್ರಮಕ್ಕೆ ಚಾಲನೆ : ಬಂಟ ಸಮಾಜದ ವಯೋವೃದ್ಧರು ತಮ್ಮ ಬದುಕಿನ ಸಂಜೆಯ ದಿನಗಳನ್ನು ಅತ್ಯಂತ ನೆಮ್ಮದಿ ಹಾಗೂ ಗೌರವಯುತವಾಗಿ ಕಳೆಯಬೇಕು ಎನ್ನುವ ಸದಾಶಯದೊಂದಿಗೆ ಬಂಟರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮವೆನಿಸಲಿರುವ ಪಡುಬಿದ್ರಿ ಬಂಟರ ಸಂಘದ ಮಹತ್ವಕಾಂಕ್ಷೆಯ ಯೋಜನೆ 'ಬಂಟಾಶ್ರಯ-ಕುಟುಂಬ ಸೇವಾಶ್ರಮ
ಯೋಜನೆ ಡಿಸೆಂಬರ್ ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಎಲ್ಲೂರು ಮಲ್ಲೆಟ್ಟು ಪರಾರಿ ಪ್ರವೀಣ್ ಭೋಜ ಶೆಟ್ಟಿಯವರು ಈ ಯೋಜನೆಗೆ ಎಲ್ಲೂರು ಗ್ರಾಮದಲ್ಲಿ ಸುಮಾರು 6 ಎಕರೆ ಜಾಗವನ್ನು ಖರೀದಿಸಿ ನೀಡಿದ್ದಾರೆ ಎಂದರು. ಡಿಸೆಂಬರ್ ನಲ್ಲಿ ಯುವ ಬಂಟರ ವಿಭಾಗದಿಂದ ಆರೋಗ್ಯ ಮೇಳವು ಇರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಿರಿಮುಡಿ ದತ್ತಿ ನಿಧಿ ಬಂಟರ ಸಂಘ (ರಿ.) ಪಡುಬಿದ್ರಿ ಇದರ ಸಂಸ್ಥಾಪಕರಾದ ಸಾಂತೂರು ಭಾಸ್ಕರ ಶೆಟ್ಟಿ, ಬಂಟ್ಸ್ ವೆಲ್ವೇರ್ ಟ್ರಸ್ಟ್ (ರಿ.) ಅಧ್ಯಕ್ಷರಾದ ಡಾ.ವೈ.ಎನ್.ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ಮತ್ತು ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿ, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಸುಜಿತ್ ಶೆಟ್ಟಿ ಹಾಗೂ ಕಾರ್ಯಕ್ರಮ ಸಂಘಟನಾ ಸಮಿತಿಯ ಸಂಚಾಲಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಶ್ರೀನಾಥ ಹಗ್ಡೆ, ಜಯ ಶೆಟ್ಟಿ ಪದ್ರ ಉಪಸ್ಥಿತರಿದ್ದರು.