ಪಾಂಗಳ ತುಂಗರಬೈಲು : ನಾಳೆ ಆರ್ ಸಿ ಸಿ ಇನ್ನಂಜೆಯಿಂದ 2ನೇ ಮನೆ ಹಸ್ತಾಂತರ
Thumbnail

ಪಾಂಗಾಳ: ತುಂಗರಬೈಲಿನಲ್ಲಿ ಟರ್ಪಾಲಿನ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಇನ್ನಂಜೆ ರೋಟರಿ ಸಮುದಾಯದಳ

ಕಾಪು, ಡಿ. 19 : ಟರ್ಪಾಲಿನ ಮನೆಯಲ್ಲಿ ವಾಸಿಸುತ್ತಿದ್ದ ಬಡಕುಟುಂಬವೊಂದಕ್ಕೆ ದಾನಿಗಳ ನೆರವಿನೊಂದಿಗೆ ವಾಸಕ್ಕೆ ಯೋಗ್ಯವಾದ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಇನ್ನಂಜೆ ರೋಟರಿ ಸಮುದಾಯದಳದ ಸದಸ್ಯರು ಮಾದರಿಯಾಗಿದ್ದಾರೆ.

ಪಾಂಗಾಳ ತುಂಗರಬೈಲು ನಿವಾಸಿಗಳಾದ ಲಕ್ಷ್ಮಣ ಮತ್ತು ಕುಶಲ ದಂಪತಿಯು ತಮ್ಮಿಬ್ಬರು ಮಕ್ಕಳೊಂದಿಗೆ ಅದೆಷ್ಟೋ ವರ್ಷಗಳಿಂದ ಟರ್ಪಾಲಿನ ಮನೆಯಲ್ಲಿ ಅಸಹಾಯಕ ರೀತಿಯಲ್ಲಿ ಬದುಕುತ್ತಿದ್ದರು. ಟರ್ಪಾಲು ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬವು ಹಲವು ಗಾಳಿ-ಮಳೆಗೆ ಮೈಯ್ಯೊಡ್ಡಿ ದಿನ ಕಳೆಯುತ್ತಿತ್ತು. 

ಅಸಹನೀಯ ಪರಿಸ್ಥಿತಿಯ ನಡುವೆ ದಿನ ಕಳೆಯುತ್ತಿದ್ದ ಕುಟುಂಬದ ಯಜಮಾನಿ ಕುಶಲ ಅವರು ಮೂರು ವರ್ಷದ ಹಿಂದೆ ಮೃತಪಟ್ಟಿದ್ದು ಮನೆಯಲ್ಲಿದ್ದವರು ಬೀದಿಗೆ ಬೀಳುವ ಸ್ಥಿತಿ ಎದುರಾಗಿತ್ತು. ಮನೆಯ ಅಸಹನೀಯ ಸ್ಥಿತಿಯಿಂದಾಗಿ ಪ್ರಾಯಕ್ಕೆ ಬಂದ ಮಗಳು ತಾಯಿ ಅಜ್ಜಿ ಮನೆಯಲ್ಲಿ ಆಶ್ರಯ ಪಡೆಯುವಂತಾಗಿತ್ತು.

ಈ ವಿಚಾರವನ್ನು ತಮ್ಮ ಪರಿಚಿತರ ಮೂಲಕವಾಗಿ ತಿಳಿದುಕೊಂಡ ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಅವರು ತಮ್ಮ ರೋಟರಿ ಸಮುದಾಯ ದಳದ ಸದಸ್ಯರೊಂದಿಗೆ ಚರ್ಚಿಸಿ ಕುಶಲ ಅವರ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಸಂಕಲ್ಪ ಸ್ವೀಕರಿಸಿದ್ದರು. 

ಇನ್ನಂಜೆ ರೋಟರಿ ಸಮುದಾಯದಳದ ಪ್ರತಿನಿಧಿಗಳಾದ ವಜ್ರೇಶ್ ಆಚಾರ್ಯ, ಪ್ರಶಾಂತ್ ಶೆಟ್ಟಿ ದಿವೇಶ್ ಶೆಟ್ಟಿ,ಪ್ರಶಾಂತ್ ಆಚಾರ್ಯ, ರವಿ ಪ್ರಸಾದ್, ಗಣೇಶ್ ಆಚಾರ್ಯ, ಮತ್ತು ಸದಸ್ಯರೊಡನೆ  ಗ್ರಾ.ಪಂ. ಅಧ್ಯಕ್ಷೆ ಮತ್ತು ಸಮುದಾಯದಳದ ಸಭಾಪತಿ ಮಾಲಿನಿ ಶೆಟ್ಟಿ ಅವರು ದಾನಿಗಳ ನೆರವಿನೊಂದಿಗೆ ಸುಮಾರು 7 ಲಕ್ಷ ರೂ. ವೆಚ್ಚದ ಮನೆಯನ್ನು ನಿರ್ಮಿಸಿಕೊಟ್ಟಿದ್ದು ನಾಳೆ ಡಿ. 21ರಂದು ಕುಶಲ ನಿವಾಸ ಹಸ್ತಾಂತರಗೊಳ್ಳಲಿದೆ.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ, ಸಭಾಪತಿ ಅಲನ್ ವಿನಯ್ ಲೂಯಿಸ್, ಮಾಲಿನಿ ಶೆಟ್ಟಿ, ನಾಗರಾಜ್ ಶೆಟ್ಟಿ, ಗುರುಪ್ರಸಾದ್ ಕಾಮತ್, ಪ್ಯಾಟ್ರಿಕ್ ಡಿ ಸೋಜ, ನವೀನ್ ಅಮೀನ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 

ಈ ಬಗ್ಗೆ ನಮ್ಮ ಕಾಪು ಮಾಧ್ಯಮದವರೊಂದಿಗೆ ಮಾತನಾಡಿದ ರೋಟರಿ ಸಮುದಾಯದಳದ ಸಭಾಪತಿ ಮಾಲಿನಿ ಇನ್ನಂಜೆ ಅವರು ಇದು ನಮಗೆ ದೇವರು ಕೊಟ್ಟಿರುವ ಸೌಭಾಗ್ಯವಾಗಿದೆ. ರೋಟರಿ ಸಮುದಾಯದಳದ ಮೂಲಕ ಎರಡನೇ ಮನೆ ನಿರ್ಮಿಸಿಕೊಡುತ್ತಿದ್ದು ನಾಲ್ಕನೇ ಶಾಶ್ವತ ಯೋಜನೆ ಇದಾಗಿದೆ. ನಮ್ಮ ಈ ಕಾರ್ಯಕ್ಕೆ ದಾನಿಗಳು, ಸ್ಥಳೀಯರು, ಉದ್ಯಮಿಗಳು ಉತ್ತಮ ರೀತಿಯ ಸಹಕಾರ ನೀಡಿದ್ದು ಅಸಹಾಯಕ ರೀತಿಯಲ್ಲಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಬದುಕು ಕಟ್ಟಿಕೊಳ್ಳಲು ನೆರವಾದ ಸಾರ್ಥಕ್ಯದ ಭಾವನೆ ಮೂಡುತ್ತಿದೆ ಎಂದರು.

20 Dec 2025, 12:10 PM
Category: Kaup
Tags: #innanje #kapu #rotary #shankarpura #rcc