ಸಮಾಜಮುಖಿ ವ್ಯಕ್ತಿತ್ವ ಸ್ಫೂರ್ತಿದಾಯಕ: ಉಷಾ ಎಸ್.
Thumbnail

​​​​​ಶಿರ್ವ : ಆರ್.ಎಸ್. ಬೆಳ್ಳೆಯವರು ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ಸಮಾಜಕ್ಕಾಗಿ ಮೀಸಲಿರಿಸಿದ್ದರು. ನಿಸ್ವಾರ್ಥ, ದ್ವೇಷ ರಹಿತ ಹಾಗೂ ಸೌಹಾರ್ದದ ಮನೋಭಾವದ ಮೂಲಕ ಪ್ರತಿಯೊಬ್ಬರಲ್ಲೂ ಆತ್ಮೀಯರೆನಿಸಿಕೊಂಡಿದ್ದರು. ಗ್ರಾಮೀಣಾಭಿವೃದ್ಧಿಯ ಕನಸು ಕಂಡು ಅದನ್ನು ಸಾಕಾರಗೊಳಿಸಲು ಅವಿರತ ಶ್ರಮಿಸಿದ ಅವರ ಸಮಾಜಮುಖಿ ವ್ಯಕ್ತಿತ್ವ ಸ್ಫೂರ್ತಿದಾಯಕವಾಗಿದೆ ಎಂದು ಪಡುಬೆಳ್ಳೆ ಶ್ರೀ ನಾರಾಯಣಗುರು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಉಷಾ ಎಸ್. ಅವರು ಹೇಳಿದರು. 
ಅವರು ರವಿವಾರ ಪಾಂಬೂರು ವಿದ್ಯಾಜ್ಯೋತಿಯಲ್ಲಿ ಜರಗಿದ ಸಮಾಜಸೇವಕ, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಸ್. ಬೆಳ್ಳೆ ಸಂಸ್ಮರಣಾ ವಾರ್ಷಿಕ ಉಪನ್ಯಾಸ ಹಾಗೂ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪಾಂಬೂರು ಹೋಲಿಕ್ರಾಸ್ ಚರ್ಚಿನ ಪ್ರಧಾನ ಧರ್ಮಗುರು ರೆ|ಡಾ| ರೋಶನ್ ಡಿಸೋಜಾ ಅವರು ರಿಚಾರ್ಡ್ ದಾಂತಿ ಪಾಂಬೂರು ಅವರು ಬರೆದ 'ಧೀಶಕ್ತಿ: ಶಿಕ್ಷಣ, ಸಾಮಾಜಿಕ ಕ್ಷೇತ್ರದ ಮೇರುವ್ಯಕ್ತಿ ಆರ್.ಎಸ್. ಬೆಳ್ಳೆ' ಕೃತಿಯನ್ನು ಬಿಡುಗಡೆಗೊಳಿಸಿದರು.
ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಪಡುಬೆಳ್ಳೆ, ನಿವೃತ್ತ ಶಿಕ್ಷಕ ರಿಚಾರ್ಡ್ ಸಲ್ಡಾನ್ಹಾ ಅವರಿಗೆ ಆರ್.ಎಸ್. ಬೆಳ್ಳೆ ಸ್ಮಾರಕ ಪುರಸ್ಕಾರವನ್ನು ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಚರ್ಚ್‌ನ ಮಾಜಿ ಉಪಾಧ್ಯಕ್ಷ, ಬೆಳ್ಳೆ ಸೊಸೈಟಿ ನಿರ್ದೇಶಕರಾದ ವಿನ್ಸೆಂಟ್ ಫೆರ್ನಾಂಡಿಸ್ ಅವರು ಪ್ರದಾನ ಮಾಡಿದರು. 

ಬೆಳ್ಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೆ ಸೊಸೈಟಿ ನಿರ್ದೇಶಕ ಬೆಳ್ಳೆ ಪಠೇಲ್‌ಮನೆ ದಯಾನಂದ ಶೆಟ್ಟಿ, ದ.ಸಂ.ಸ. ಅಂಬೇಡ್ಕರ್ ವಾದ ಕಾಪು ತಾಲೂಕು ಶಾಖೆಯ ಸಂಘಟನಾ ಸಂಚಾಲಕ ಕೃಷ್ಣ ಮೂಡುಬೆಳ್ಳೆ, ಸಿ.ಎ. ಸ್ಟೀವನ್ ಮೆಂಡೋನ್ಸಾ, ಗಣೇಶ್ ತಂತ್ರಿ, ಆಲ್ಫೋನ್ಸ್ ಕೆ. ಆಳ್ವಾ, ಸ್ಯಾಮ್ಸನ್ ನೊರೋನ್ಹಾ, ಮುರಳೀಧರ ಸಾಮಗ ಉಪಸ್ಥಿತರಿದ್ದರು.

ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಕೃತಿ ಪರಿಚಯ ಮಾಡಿದರು. ಸಂಘಟಕ ರಿಚಾರ್ಡ್ ದಾಂತಿ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿ ವಂದಿಸಿದರು. 

 

 

 

22 Dec 2025, 10:03 AM
Category: Kaup
Tags: