ಕಾಪು : ನಮ್ಮೂರಿನಲ್ಲಿಯೇ ತಿರುಪತಿ ದೇವರ ದರ್ಶನ ಪಡೆಯುವ ನಿಟ್ಟಿನಲ್ಲಿ ತಿರುಪತಿ ತಿರುಮಲ ದೇವಸ್ಥಾನದ ನೇತೃತ್ವದಲ್ಲಿ ಕೆ.ಕೃಷ್ಣಮೋಹನ್ ಪೈ, ಯುಎಸ್‌ಎ ಅವರ ಸಂಕಲ್ಪದಂತೆ ಕಟಪಾಡಿ ವಿಜಯಾ ಪೈ ಮತ್ತು ಪುರುಷೋತ್ತಮ ಪೈ ಹಾಗೂ ಕುಟುಂಬಸ್ಥರ ವತಿಯಿಂದ ಕಟಪಾಡಿ ಎಸ್ ವಿಎಸ್ ವಿದ್ಯಾವರ್ಧಕ ಸಂಘ ಹಾಗೂ ಕಟಪಾಡಿ ಮತ್ತು ಆಸುಪಾಸಿನ ನಾಗರಿಕರು, ಗಣ್ಯರು, ಸಂಘ ಸಂಸ್ಥೆಗಳು, ದೇವಸ್ಥಾನ ದೈವಸ್ಥಾನ, ಭಜನಾ ಮಂದಿರಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಿಬಂದಿಗಳ ಸಹಕಾರದೊಂದಿಗೆ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಎ.11, ಶನಿವಾರ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಜರಗಲಿದೆ ಎಂದು ಕಾರ್ಯಕ್ರಮದ ಉಸ್ತುವಾರಿ ಸತ್ಯೇಂದ್ರ ಪೈ ಹೇಳಿದರು.
ಅವರು ಸೋಮವಾರ ಕಾಪು ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಿರುಪತಿಯಿಂದಲೇ ದೇವರು ತಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿಯವರ ಪ್ರಧಾನ ಅರ್ಚಕರಿಂದಲೇ ಕಲ್ಯಾಣೋತ್ಸವದ ಧಾರ್ಮಿಕ ಅನುಷ್ಠಾನಗಳು ಜರಗಲಿದೆ.
ಮಧ್ಯಾಹ್ನ 3:30ಕ್ಕೆ ಕಟಪಾಡಿ ಪೇಟೆಗೆ ಶ್ರೀ ಶ್ರೀನಿವಾಸ ದೇವರು ಆಗಮಿಸಿ, ಕಟಪಾಡಿ ಪೇಟೆಯಿಂದ ಕಲ್ಯಾಣ ಮಂಟಪದ ವೇದಿಕೆಗೆ ಮೆರವಣಿಗೆ ಹೊರಡಲಿದೆ
ಸಂಜೆ ಗಂಟೆ 5 ರಿಂದ ಶ್ರೀದೇವರ ವಿವಾಹ ಮಂಟಪ ಪ್ರವೇಶ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತೀ ದೇವಿಯ ಆಗಮನ, ಸ್ವರ್ಣಮಣಿ ಬಂಧನ, ಮುಹೂರ್ತ ನಿರೀಕ್ಷಣೆ, ಮಾಲಾ ಧಾರಣೆ ನಡೆದು ಗಂಟೆ 6:25 ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀ ಶ್ರೀನಿವಾಸ ದೇವರಿಗೆ ಶ್ರೀ ಪದ್ಮಾವತೀ ದೇವಿಯ ಕನ್ಯಾದಾನ, ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚರಣೆ ಮಹಾಪ್ರಸನ್ನ ಪೂಜೆ ಅಷ್ಟಾವಧಾನ ಸೇವೆ, ತೀರ್ಥ ಪ್ರಸಾದ ವಿನಿಯೋಗ ಜರಗಲಿದೆ. ರಾತ್ರಿ ಗಂಟೆ 8 ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ತಿರುಪತಿಗೆ ಹೋಗಲು ಸಾಧ್ಯವಾಗದವರಿಗೆ ಇಲ್ಲಿಯೇ ತಿರುಪತಿ ದೇವರ ದರ್ಶನ ಪಡೆಯಬಹುದಾಗಿದೆ. ತಿರುಪತಿ ದೇವಸ್ಥಾನಕ್ಕೆ ಕಾಣಿಕೆ ಕೊಡುವವರಿಗೆ ಇಲ್ಲಿಯೇ ತಿರುಪತಿ ದೇವಸ್ಥಾನದ ಹುಂಡಿಗೆ ಹಣ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ವಿಶೇಷಚೇತನ ಹಾಗೂ ಅಶಕ್ತ ನಾಗರಿಕರಿಗೆ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗುವುದು.
ಭಾಗವಹಿಸುವ ಭಕ್ತರಿಗೆ ತಿರುಪತಿಯಿಂದಲೇ ಬರಲಿರುವ ಲಡ್ಡು ಪ್ರಸಾದ ಸಹಿತ ಪ್ರಸಾದ ವಿತರಣೆ ನಡೆಯಲಿದೆ.
ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳ ವಾಹನ ನಿಲುಗಡೆಗೆ ವಿವಿಧ ಸ್ಥಳಗಳಲ್ಲಿ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು ವಾಹನ ನಿಲುಗಡೆಯ ಸ್ಥಳದಿಂದ ಕಲ್ಯಾಣ ಮಂಟಪಕ್ಕೆ ಆಗಮಿಸಲು ಬದಲಿ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಗ್ಗೆ ಕಲ್ಯಾಣೋತ್ಸವ ಸಮಿತಿಯ ವೆಬ್ ಸೈಟ್
https://www.katapadykalyanotsava.com/ ನಲ್ಲಿ ವಿವರಗಳು ಲಭ್ಯವಿದೆ.
ಸುಮಾರು 750 ರಿಂದ 800 ಸ್ವಯಂಸೇವಕರು ಸೇವೆಗೆ ತಯಾರಾಗಿದ್ದಾರೆ. ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಯಾರಿಂದಲೂ ಯಾವುದೇ ರೀತಿಯ ಧನ ಸಹಾಯವನ್ನು ಸ್ವೀಕರಿಸಲಾಗುವುದಿಲ್ಲ. ಶ್ರೀ ವೆಂಕಟರಮಣ ದೇವರಿಗೆ ಹೂ, ಹಣ್ಣು ಹಾಗೂ ತುಳಸಿಯನ್ನು ಅರ್ಪಿಸಲು ಬಯಸುವ ಭಕ್ತಾದಿಗಳು ಅಪರಾಹ್ನ ಗಂಟೆ 3ರ ಒಳಗಾಗಿ ಕಲ್ಯಾಣ ಮಂಟಪದಲ್ಲಿ ನೀಡಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಕೃಷ್ಣಮೋಹನ್ ಪೈ, ಯುಎಸ್‌ಎ, ಸುಧಾಕರ ಬ್ರಹ್ಮಾವರ, ಭಾಸ್ಕರ ಕಾಮತ್, ನಾಗೇಶ್ ಕಾಮತ್, ಪ್ರಕಾಶ್ ಸುವರ್ಣ ಉಪಸ್ಥಿತರಿದ್ದರು.
