ಶಿರ್ವ : ಕರಾವಳಿ ಜಿಲ್ಲೆಗಳ ಗಂಡುಕಲೆ ಎಂದೇ ಕರೆಯಲ್ಪಟುವ ಯಕ್ಷಗಾನಕ್ಕೆ ಪುರಾತನ ಇತಿಹಾಸವಿದ್ದು, ಅವಿದ್ಯಾವಂತರಲ್ಲೂ ಭಾರತೀಯ ಸನಾತನ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆ ಧಾರ್ಮಿಕ ಪ್ರಜ್ಞೆ, ನೈತಿಕ ಜೀವನ ಮೌಲ್ಯಗಳನ್ನು ಜಾಗೃತಗೊಳಿಸುವಲ್ಲಿ ಯಕ್ಷಗಾನದ ಕೊಡುಗೆ ಅನನ್ಯ ಎಂದು ನಿವೃತ್ತ ಶಿಕ್ಷಕ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ನುಡಿದರು.
ಅವರು ರವಿವಾರ ಶಂಕರಪುರ ಸಮೀಪದ ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ನಡೆಸುತ್ತಿರುವ "ಕೃಷ್ಣವೇಣಿ ಆಶ್ರಯ ಧಾಮ"ದಲ್ಲಿ ಹಿರಿಯ ನಾಗರಿಕರಿಗಾಗಿ ಪ್ರಪ್ರಥಮ ಬಾರಿಗೆ ಶ್ರೀಮಹಾಗಣಪತಿ-ಮಹಾಕಾಳಿ ಯಕ್ಷಗಾನ ಮಂಡಳಿ ಹಿರಿಯಡ್ಕ ಇವರಿಂದ "ರಾಮಚರಿತ" ಯಕ್ಷಗಾನ ಪ್ರದರ್ಶನಕ್ಕೆ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಆಶ್ರಯಧಾಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಐ.ರಮೇಶ್ ಮಿತ್ತಾಂತಾಯ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು.
ಸಾಲ್ಮರ ಗೋವಿಂದ ಭಟ್ ಕುಟುಂಬದ ಹಿರಿಯರಾದ ನಿವೃತ್ತ ಶಿಕ್ಷಕಿ ಶಾರದಾ ಹೆಬ್ಬಾರ್ ವೇದಿಕೆಯಲ್ಲಿದ್ದರು.
ಯಕ್ಷಗಾನ ಪ್ರದರ್ಶನಕ್ಕೆ ಸರ್ವರೀತಿಯಿಂದಲೂ ಸಹಕರಿಸಿದ ನ್ಯಾಯವಾದಿ ಪ್ರಸಾದ್ ಉಡುಪಿ ಮತ್ತು ಮಮತಾ ಪ್ರಸಾದ್ ಇವರನ್ನು ಸನ್ಮಾನಿಸಲಾಯಿತು.
ಕಾಲಮಿತಿಯ ಈ ಯಕ್ಷಗಾನದಲ್ಲಿ ಭಾಗವತರಾಗಿ ಚಂದ್ರಯ್ಯ ಆಚಾರ್ಯ ಬಿದ್ಕಲ್ಕಟ್ಟೆ, ಮದ್ದಲೆ-ರಾಹುಲ್ ಅಮೀನ್ ತೆಕ್ಕಟ್ಟೆ, ಚಂಡೆ- ದೀಪಕ್ ಪೂಜಾರಿ ಸಾಸ್ತಾನ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಕೃಷ್ಣ - ಶಾಂತಿ ವನ ಜತ್ತನ್ನ, ಸತ್ರಾಜಿತ-ಸುಶೀಲಾ ಪೂಜಾರ್ತಿ, ಜಾಂಬವಂತ-ರಾಘವೇಂದ್ರ ಗಿಳಿಯಾರು, ಬಲರಾಮ-ಗಣೇಶ ಆಚಾರ್ಯ ಬೈಕಾಡಿ, ಪ್ರಸೇನ-ಪ್ರಜ್ವಲ್ ಪೂಜಾರಿ ಸಾಸ್ತಾನ, ಜಾಂಬವತಿ-ಉಲ್ಲಾಸ್ ಕಾಂಚನ್ ಕೋಟ, ಗೋಪಿಕೆ -ಪ್ರಜ್ವಲ್ ಪಡುಕೆರೆ ಅಭಿನಯಿಸಿದ್ದರು.
ಕನ್ನಡ ಮತ್ತು ತುಳು ಸಂಭಾಷಣೆಯಲ್ಲಿ ಪ್ರದರ್ಶನಗೊಂಡ ಈ ಯಕ್ಷಗಾನ ಪ್ರದರ್ಶನ ಹಿರಿಯನಾಗರಿಕರನ್ನು ಮನಸೂರೆಗೊಳಿಸುವಲ್ಲಿ ಯಶಸ್ವಿಯಾಯಿತು.
