ಕಾಪು : ತುಳುನಾಡಿನಲ್ಲಿ ಆಟಿ ತಿಂಗಳೆಂದರೆ ನಂಬಿಕೆಯ ತಿಂಗಳಾಗಿದೆ. ನಮ್ಮ ಹಿರಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ತಿಂಗಳು ಆಟಿ. ಹಾಗಾಗಿ ಪ್ರಕೃತಿದತ್ತವಾದ ಔಷಧೀಯ ಗುಣವುಳ್ಳ ಗೆಡ್ಡೆ ಗೆಣಸು, ಸೊಪ್ಪು ತರಕಾರಿಗಳನನು ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದರು ಎಂದು ಜಾನಪದ ವಿದ್ವಾಂಸ ದಯಾನಂದ ಕೆ.ಶೆಟ್ಟಿ ದೆಂದೂರು ತಿಳಿಸಿದ್ದಾರೆ.
ಅವರು ಕಟಪಾಡಿ ಎಸ್ವಿಎಸ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಎಸ್ವಿಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ಆಟಿದ ಅಟ್ಟಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಕಟಪಾಡಿಯ ವೈದ್ಯ ಡಾ.ಯು.ಕೆ.ಶೆಟ್ಟಿ ಅವರು ಹಿರಿಯರಿಗೆ ಆಟಿಯ ಅಡುಗೆ ಬಡಿಸಿ, ತುಡರ್ ಹಚ್ಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟಿ ಆಡಂಬರದ ತಿಂಗಳಲ್ಲ. ಕೃಷಿಕಾಯಕದಿಂದ ನೊಂದು ಬೆಂದ ಜೀವಗಳಿಗೆ ವಿಶ್ರಾಂತಿಯ ಸಮಯವಾಗಿತ್ತು. ಜೀವನವನ್ನು ಸಂಭ್ರಮಿಸುವ ಕಾಲ ಆಟಿಯಾಗಿರಲಿಲ್ಲ. ಕಾಯಿಲೆ ಕಸಾಲೆಗಳಿಂದ ಬಳಲುತ್ತಿದ್ದ ಕಾಲವಾಗಿತ್ತು. ಆಟಿದ ಕೂಟಗಳಂತಹ ಸಂಭ್ರಮದ ವಾತಾವರಣ ನಿಜವಾದ ಆಟಿ ತಿಂಗಳ ಆಚರಣೆಯಲ್ಲಿಲ್ಲ ಎಂದರು.
ಕಟಪಾಡಿ ಎಸ್ವಿಎಸ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಅಧ್ಯಕ್ಷತೆವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಪ್ರಭಾ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಕಾಮತ್, ಕಲಾ ಕಾರ್ಯದರ್ಶಿ ಪ್ರಶಾಂತ್ ಆರ್.ಎಸ್, ನಿಕಟಪೂರ್ವ ಕೋಶಾಧಿಕಾರಿ ಮಹೇಶ್ ಎನ್.ಅಂಚನ್, ನಾಟಕ ಕಲಾವಿದ ನಾಗೇಶ್ ಕಾಮತ್ ಕಟಪಾಡಿ ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿ ಸಂಘದ ಸದಸ್ಯ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಎನ್.ಜಿ.ಸುಕುಮಾರ್ ವಂದಿಸಿದರು.
ಹಳೆವಿದ್ಯಾರ್ಥಿಗಳು ತಯಾರಿಸಿರುವ 40ಕ್ಕೂ ಅಧಿಕ ಬಗೆಯ ಆಟಿಯ ತಿಂಡಿ ತಿನಸುಗಳ ಖಾದ್ಯ ವೈವಿಧ್ಯ ಪ್ರದರ್ಶನ, ಸಹಭೋಜನ, ಔಷಧೀಯ ಸಸ್ಯಗಳ ಪ್ರದರ್ಶನ, ವಿವಿಧ ಮನೋರಂಜನಾ ಜನಪದ ಆಟೋಟ ಸ್ಪರ್ಧೆಗಳು ನಡೆದವು
