ಕಾಪು : ಹಲವು ವ್ಯಕ್ತಿಗಳ ಕನ್ನಡದ ಒಲವು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾಗಿದೆ. ಇದು ಇಂದು ಸಾರ್ಥಕ್ಯ ರೂಪು ತಳೆದಿದೆ. ಪಂಚ ದ್ರಾವಿಡ ಭಾಷೆಯಲ್ಲಿ ಒಂದಾದ ಕನ್ನಡ, ಹೃದಯದ ಭಾಷೆ. ಕನ್ನಡದ ಓದಿನ ಅಭಿರುಚಿಗೆ ಮಕ್ಕಳನ್ನು ತೊಡಗಿಸಿ, ಕನ್ನಡದಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅವಕಾಶವಿದೆ. ಭಾಷೆಗೆ ಜಾತಿ, ಮತದ ಭೇದಭಾವವಿಲ್ಲ ಎಂದು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಘಟಕದ ವತಿಯಿಂದ ಕಾಪು ಸಾರ್ವಜನಿಕ ಗ್ರಂಥಾಲಯದಲ್ಲಿ ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಷತ್ತು ಇದರ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡನಾಡಿದರು.
ಸನ್ಮಾನ : ಪುರಸಭಾ ವ್ಯಾಪ್ತಿಯ ಸಾರ್ವಜನಿಕ ಗ್ರಂಥಾಲಯಗಳ ಗ್ರಂಥ ಮೇಲ್ವಿಚಾರಕರುಗಳಾದ ಆಶಾ ಉಳಿಯಾರಗೋಳಿ, ಪೂರ್ಣಿಮಾ ಕಾಪು, ನಸ್ರಿನ್ ಫಾತಿಮಾ ಮಲ್ಲಾರು ಇವರನ್ನು ಪರಿಷತ್ತು ವತಿಯಿಂದ ಸನ್ಮಾನಿಸಿ ಮೂರೂ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ನೀಡಲಾಯಿತು. ಗ್ರಂಥಾಲಯದ ಮೇಲ್ವಿಚಾರಕರುಗಳಿಂದ ಪರಸಭೆಯ ನೂತನ ಅಧ್ಯಕ್ಷರಾದ ಮೋಹಿನಿ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಪುರಸಭಾ ಮುಖ್ಯ ಅಧಿಕಾರಿ ನೀಲಕಂಠ ಮೇಸ್ತ ದಿಕ್ಸೂಚಿ ಭಾಷಣ ಮಾಡಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯದ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರಿ,, ಕಸಾಪ ಜಿಲ್ಲಾ ಸಮಿತಿ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯ ನರಂಹಮೂರ್ತಿ ರಾವ್, ತಾಲೂಕು ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ, ಮಧುಕರ್ ಎಸ್.ಕಲ್ಯಾ, ಪುರಸಭಾ ಕೌನ್ಸಿಲರ್ಗಳಾದ ಅನಿಲ್ ಕುಮಾರ್, ಸರಿತಾ ಉಪಸ್ಥಿತರಿದ್ದರು.
ತಾಲೂಕು ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಯಶೋದಾ ಎಲ್ಲೂರು ಸನ್ಮಾನಿತರನ್ನು ಪರಿಚಯಿಸಿದರು. ಗೌ.ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು. ಸಮಿತಿ ಸದಸ್ಯರಾದ ಸತ್ಯಸಾಯಿ ಪ್ರಸಾದ್ ನಿರೂಪಿಸಿದರು.
