ವಧುವರರ ಸಮಾವೇಶಗಳು ಯುವ ಜನತೆಯ ಸುಂದರ ಭವಿಷ್ಯಕ್ಕೆ ಭದ್ರ ಬುನಾದಿ : ನಾಗೇಂದ್ರ ಕಾಮತ್
Thumbnail

ಶಿರ್ವ: ಇಂದು ಯುವ ಪೀಳಿಯು ಯೋಗ್ಯ ಹಾಗೂ ಒಪ್ಪುವಂತಹ ವೈವಾಹಿಕ ಜೀವನವನ್ನು ಕಂಡುಕೊಳ್ಳುವುದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಆಯೋಜನೆಗೊಳ್ಳುವ ವಧು ವರರ ಸಮಾವೇಶಗಳು ಯುವಜನತೆಯ ಸುಂದರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುತ್ತವೆ ಎಂದು ಸಪ್ತಪದಿ ವಿವಾಹ ಮಾಹಿತಿ ಕೇಂದ್ರ ಬೆಂಗಳೂರು ಇದರ ಅಧ್ಯಕ್ಷ ನಾಗೇಂದ್ರ ಕಾಮತ್ ನುಡಿದರು. ಅವರು ರವಿವಾರ ಬಂಟಕಲ್ಲು ರೋಟರಿ ಭವನದಲ್ಲಿ ಆರ್‌ಎಸ್‌ಬಿ ಹಾಗೂ ಬಿಜಿಎಸ್‌ಬಿ ಸಮಾಜ ಬಾಂಧವರ ಜಂಟಿ ಆಯೋಜನೆಯಲ್ಲಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಏರ್ಪಡಿಸಿದ "ಋಣಾನುಬಂಧ" ವಧುವರರ ಸಮಾವೇಶ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಜ್ಯೋತಿಷಿಗಳಾದ ಮಾಣ್ಯೂರು ವೈ ಉಪೇಂದ್ರ ಪ್ರಭು ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಜಾತಕ ಫಲಗಳನ್ನು ಪರಿಶೀಲಿಸಿ ವಿವಾಹವಾಗುವುದು ದಾಂಪತ್ಯ ಜೀವನದ ಧೀರ್ಘಾವಧಿ ಯಶಸ್ಸಿಗೆ ಒಳಿತು ಎಂದರು. 

ಸನ್ಮಾನ : ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಉಪೇಂದ್ರ ಪ್ರಭು ಹಾಗೂ ಉದ್ಯಮಿ ಎಂ.ಎನ್.ನಾಯಕ್, ಅಂತಾರಾಷ್ಟ್ರೀಯ ತರಬೇತುದಾರ ಸುಬ್ರಹ್ಮಣ್ಯ ಕುಲೇದು ಇವರನ್ನು ಸನ್ಮಾನಿಸಲಾಯಿತು. 

ತರಬೇತುದಾರ ಸುಬ್ರಹ್ಮಣ್ಯ ಕುಲೇದು ಇವರು ಸಮಾಜದ ಯುವಜನತೆಗೆ ಪ್ರೇರಣೆ ನೀಡುವ ವಿಶೇಷ ಉಪನ್ಯಾಸವನ್ನು ನೀಡಿದರು. 

 ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರ್ಕಳ ಹಿರ್ಗಾನದ ಶ್ರೀಆದಿಶಕ್ತಿ ಮಹಾಲಕ್ಷ್ಮಿ ದೇವಳದ ಮಾಜಿ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಉದ್ಯಮಿ ವಾಸುದೇವ ಕೃಷ್ಣ 
ಅವರು ಮಾತನಾಡಿದರು.

 ಸಂಚಾಲಕ ಎಂ.ಡಿ.ಪ್ರಭು ವೇದಿಕೆಯಲ್ಲಿದ್ದರು. ನಿವೃತ್ತ ಮುಖ್ಯಶಿಕ್ಷಕ ಚಂದ್ರಹಾಸ ಪ್ರಭು ಮುದರಂಗಡಿ ಗಣ್ಯರನ್ನು ಪರಿಚಯಿಸಿದರು. ಸುನಿಲ್ ಬೋರ್ಕಾರ್ ಪುತ್ತೂರು ನಿರೂಪಿಸಿದರು. ಸರೋಜಿನಿ ಕೊಡಿಬೆಟ್ಟು ವಂದಿಸಿದರು. 

ಕಾರ್ಯಕ್ರಮದಲ್ಲಿ 192 ವಧುವರರು ತಮ್ಮ ಹೆಸರುಗಳನ್ನು ಅಧಿಕೃತವಾಗಿ ನೋಂದಾಯಿಸಿದ್ದರು.

17 May 2026, 07:11 PM
Category: Kaup
Tags: