ಕನ್ನಡ ಶಾಲೆಗಳು ಉಳಿಯಲು ಕಾಲಕ್ಕೆ ತಕ್ಕಂತೆ ಪರಿವರ್ತನೆ ಅಗತ್ಯ : ರಾಘವೇಂದ್ರ ಶ್ರೀನಿವಾಸ ಭಟ್
Thumbnail

ಕಾಪು : ಅಧ್ಯಾಪಕರು ಮತ್ತು ಸಮಾಜಸೇವಕರನ್ನು ಸಮಾಜ ಸದಾ ನೆನಪಿನಲ್ಲಿ ಇಡುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸೋದೆ ಶ್ರೀಗಳಾದ ವಿಶ್ವೇಂದ್ರತೀರ್ಥ ಶ್ರೀಪಾದರಿಂದ ಸಂಸ್ಥಾಪಿಸಲ್ಪಟ್ಟ ಈ ವಿದ್ಯಾಸಂಸ್ಥೆ ಭವಿಷ್ಯದ ಕನಸ್ಸನ್ನು ಹೊತ್ತು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಂಸ್ಕಾರವಂತ ಶಿಕ್ಷಣವನ್ನು ನೀಡಿದೆ. ಶಿಕ್ಷಣ ಕ್ಷೇತ್ರಕ್ಕೆ ಉಡುಪಿ ಅಷ್ಟಮಠಗಳಲ್ಲಿ ಅದಮಾರು, ಪೇಜಾವರ, ಸೋದೆ ಮಠಗಳ ಕೊಡುಗೆ ಅವಿಸ್ಮರಣೀಯ. ವಿದ್ಯಾರ್ಥಿಗಳು ತಾಯಿ, ತಂದೆ ಮತ್ತು ಶಾಲೆಯನ್ನೂ ಯಾವತ್ತೂ ಮರೆಯಬಾರದು. ಇಂದಿನ ಸ್ಫರ್ಧಾತ್ಮಕ ಕಾಲಘಟ್ಟದಲ್ಲಿ ಕನ್ನಡ ಶಾಲೆಗಳು ಉಳಿಯಲು ಕಾಲಕ್ಕೆ ತಕ್ಕಂತೆ ಪರಿವರ್ತನೆ ಅಗತ್ಯ ಎಂದು ಶತಮಾನೋತ್ತರ ಸೇವಾ ಇತಿಹಾಸ ಹೊಂದಿರುವ ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಶ್ರೀನಿವಾಸ ಭಟ್ ನುಡಿದರು. 
ಅವರು ಬುಧವಾರ ಇನ್ನಂಜೆ ಎಸ್.ವಿ.ಎಚ್ ಕನ್ನಡ ಮಾಧ್ಯಮ ಶಾಲೆಗೆ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ವಾಹನದ ದಾಖಲೆ ಸಹಿತ ಕೀ ಯನ್ನು ಯಸ್‌ವಿಎಚ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರೂ, ಉಡುಪಿ ಶ್ರೀಸೋದೆ ಮಠದ ಯತಿವರ್ಯರಾದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೋದೆ ಶ್ರೀಗಳು ತಮ್ಮ ಆಶೀರ್ವಚನದಲ್ಲಿ 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಆರಂಭೋತ್ಸವ ಕರ್ನಾಟಕ ಬ್ಯಾಂಕ್‌ನ ವಾಹನದ ಕೊಡುಗೆಯ ಮೂಲಕ ಶುಭಾರಂಭಗೊಂಡಿದೆ. ಕಾಲ ಬದಲಾಗುತ್ತಿದೆ. ವ್ಯವಸ್ಥೆಗಳು ಜಾಸ್ತಿಯಾಗುತ್ತಿವೆ. ಮಕ್ಕಳ ಭೌದ್ಧಿಕ ಮಟ್ಟ ಅಭಿವೃದ್ಧಿಗೆ ಶಿಕ್ಷಣದ ಜೊತೆಗೆ ಪೂರಕ ವ್ಯವಸ್ಥೆಗಳೂ ಆಗಬೇಕು. ಕರ್ನಾಟಕ ಬ್ಯಾಂಕ್‌ಗೂ ಸೋದೆ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಇನ್ನಂಜೆ ಶಿಕ್ಷಣ ಸಂಸ್ಥೆಗೆ ಇದು ಮೂರನೇ ಬಸ್‌ನ ಕೊಡುಗೆಯಾಗಿ ಬಂದಿದೆ. ವಿದ್ಯಾರ್ಥಿಗಳಿಗೂ ಈ ಭಾವನೆ ಇರಬೇಕು ಎಂದರು. 

ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್.ಐತಾಳ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

 ಟ್ರಸ್ಟ್ನ ಉಪಾಧ್ಯಕ್ಷ ಪಿ.ಶ್ರೀನಿವಾಸ ತಂತ್ರಿ, ಎಸ್‌ವಿಎಚ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ವೇದಿಕೆಯಲ್ಲಿದ್ದರು.

 ಕರ್ನಾಟಕ ಬ್ಯಾಂಕ್ ಉಡುಪಿ ವಲಯದ ಸಹಾಯಕ ಮಹಾ ಪ್ರಬಂಧಕರಾದ ರಮೇಶ್ ವೈದ್ಯ, ಕರ್ನಾಟಕ ಬ್ಯಾಂಕ್ ಉಡುಪಿ ಶಾಖಾಧಿಕಾರಿ ಪ್ರಶಾಂತ್ ರಾವ್, ಬಂಟಕಲ್ಲು ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ನಾಗರಾಜ ಭಟ್, ಇನ್ನಂಜೆ ಪ್ರೌಢ ಶಾಲಾ ಮುಖ್ಯ ಶಿಕ್ಷಕ ನಟರಾಜ ಉಪಾಧ್ಯಾಯ ಉಪಸ್ಥಿತರಿದ್ದರು.

 ಸಂಸ್ಕೃತ ಪಂಡಿತರಾದ ರಾಘವೇಂದ್ರ ಪುರಾಣಿಕ್ ಪರಿಚಯಿಸಿದರು. ಉಪನ್ಯಾಸಕಿ ರೊಯಿಲಿನ್ ಪ್ರಿಯಾ ಕಸ್ತಲಿನೋ ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲ ರಾಜೇಂದ್ರ ಪ್ರಭು ವಂದಿಸಿದರು.

28 May 2026, 09:59 AM
Category: Kaup
Tags: