ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿರುವ ಅಂಡರ್ ಪಾಸ್ ಹಾಗೂ ಸರ್ವಿಸ್ ರಸ್ತೆಯಲ್ಲಿ ಬಹಳಷ್ಟು ಬಾರಿ ರಸ್ತೆ ಅಪಘಾತಗಳು ಉಂಟಾಗಿರುತ್ತವೆ, ಬಹಳ ಮುಖ್ಯವಾಗಿ ವಾಹನಗಳ ದಟ್ಟಣೆಯಿಂದ, ಅತಿಯಾದ ವೇಗದಿಂದ ಮತ್ತು ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಇರುವುದರಿಂದ ಈ ಅಪಘಾತಗಳು ಉಂಟಾಗಿರುತ್ತವೆ.
ಮಾರಿಯಮ್ಮನ ರಜತ ರಥ ಪ್ರವೇಶ ಮತ್ತು ಪ್ರತಿಮೆ ವಿಸರ್ಜನೆಯ ಸಂದರ್ಭದಲ್ಲೂ ರಸ್ತೆಯನ್ನು ಹಾದುಹೋಗಲು ಇರುವುದರಿಂದ ಬಹಳಷ್ಟು ಬಾರಿ ತೊಂದರೆಯಾಗುತ್ತಿತ್ತು.
ಈ ನಿಟ್ಟಿನಲ್ಲಿ ಹಲವಾರು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗದವರಿಗೆ, ಜಿಲ್ಲಾಡಳಿತಕ್ಕೆ ಮನವಿಯನ್ನ ಮಾಡಿದ್ದರು ಕೂಡ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಸಮಾಜ ಸೇವಕ ಜಯರಾಮ್ ಆಚಾರ್ಯ ಈ ಹಿಂದೆ ನಮ್ಮ ಕಾಪು ಮಾಧ್ಯಮದಲ್ಲಿ ಮಾಹಿತಿಯನ್ನು ನೀಡಿದ್ದರು.
ಇದೀಗ ಜೂನ್ 17ರ ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಯಾದವ್ ಐಎಎಸ್ ಅವರು ಉಚ್ಚಂಗಿ ಸಹಿತ ಕಾಪು ಶ್ರೀ ಮಾರಿಯಮ್ಮನ ದರುಶನ ಪಡೆಯಲು ಕಾಪುವಿಗೆ ಬಂದಿದ್ದಾಗ ಸಾರ್ವಜನಿಕರ ಪರವಾಗಿ ಸಮಾಜಸೇವಕ ಮತ್ತು ಜಾತ್ಯಾತೀತ ಜನತಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್ಯ ಅವರು ಈ ಬಗ್ಗೆ ಮನವಿಯೊಂದಿಗೆ ಮಾಹಿತಿಯನ್ನು ನೀಡಿದರು.
ಭಗವಂತನ ಸನ್ನಿಧಾನದಲ್ಲಿ ಮನವಿಯನ್ನು ನೀಡಿರುವುದರಿಂದ ನಿಮ್ಮ ಕೆಲಸ ಆಯ್ತು ಅಂತ ತಿಳಿದುಕೊಳ್ಳಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
