ಉದ್ಯಾವರ : ನಿರಂತರ್ ಬಹುಭಾಷಾ ಸಿನಿಮಾ ಉತ್ಸವ - 2026 ರ ಪೋಸ್ಟರ್ ಬಿಡುಗಡೆ
Thumbnail

ಕಾಪು : ಕಲೆ, ಸಾಹಿತ್ಯ, ನಾಟಕ, ಸಂಗೀತ ಮತ್ತು ಸಿನಿಮಾಕ್ಕೆ ಪ್ರೋತ್ಸಾಹ ನೀಡುತ್ತಿರುವ ನಿರಂತರ್ ಉದ್ಯಾವರ್ ನೇತೃತ್ವದಲ್ಲಿ ಜು. 31 ರಿಂದ ಆ.2ರವರೆಗೆ ನಡೆಯುವ ಮೂರು ದಿನದ 'ನಿರಂತರ್ ಬಹುಭಾಷಾ ಸಿನಿಮಾ ಉತ್ಸವ - 2026' ರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಬಲಾಯಿಪಾದೆ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉದ್ಯಾನವನದಲ್ಲಿ ನಡೆಯಿತು.

ವಿವಿಧ ಧರ್ಮದ ಸಾಮಾಜಿಕ ಮುಖಂಡರುಗಳು ಜಂಟಿಯಾಗಿ ಪೋಸ್ಟರ್ ಬಿಡುಗಡೆಗೊಳಿಸಿದ್ದು, ಬಳಿಕ ಮಾತನಾಡಿದ ಶ್ರೀ ನಾರಾಯಣಗುರು ಯುವ ವೇದಿಕೆ ಉಡುಪಿ ಜಿಲ್ಲೆ ಇದರ ಗೌರವಾಧ್ಯಕ್ಷ ಸದಾಶಿವ ಕಟ್ಟೆಗುಡ್ಡೆ, ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ಇಂತಹ ಸಿನಿಮಾಗಳು ಸಮಾಜದಲ್ಲಿ ಬದಲಾವಣೆ ಮತ್ತು ಹೊಸತನಕ್ಕೆ ಕಾರಣವಾಗುತ್ತಿದೆ. ಶ್ರೀ ನಾರಾಯಣ ಗುರುಗಳ ಚಿಂತನೆಯಂತೆ ಸಮಾಜ ಕಟ್ಟುವ ಪ್ರಯತ್ನದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಸಿನಿಮಾ ಉತ್ಸವಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರೋಯ್ಸ್ ಫೆರ್ನಾಂಡಿಸ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ವ್ಯವಸ್ಥಾಪಕ ಜೀವನ್ ಡಿಸೋಜಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಕಾರ್ಯದರ್ಶಿ ಜೋನ್ ಗೋಮ್ಸ್, ಕೋಶಾಧಿಕಾರಿ ವಿಲ್ಫ್ರೆಡ್ ಡಿಸೋಜಾ ಉಪಸ್ಥಿತರಿದ್ದರು.

 ನಿರಂತರ್ ಉದ್ಯಾವರ ಅಧ್ಯಕ್ಷ ರೋಷನ್ ಕ್ರಾಸ್ಟೋ ಸ್ವಾಗತಿಸಿದರೆ, ರೊನಾಲ್ಡ್ ಡಿಸೋಜಾ ವಂದಿಸಿದರು. ನಿರಂತರ ಉದ್ಯಾವರದ ಸ್ಥಾಪಕ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.

 ಜು. 31ರಂದು ಶುಕ್ರವಾರ ಸೂತನ್ ಗೌಡ ರಚನೆ ಮತ್ತು ನಿರ್ದೇಶನದ ಕನ್ನಡ ಸಿನಿಮಾ ವಲವಾರ, ಅಗಸ್ಟ್ 1 ಶನಿವಾರ ಅನೀಶ್ ಪೂಜಾರಿ ವೇಣೂರು ರಚನೆ ಮತ್ತು ನಿರ್ದೇಶನದ ತುಳು ಸಿನಿಮಾ ದಸ್ಕತ್ ಮತ್ತು ಅಗಸ್ಟ್ 2 ರವಿವಾರ ಸ್ಟ್ಯಾನಿ ಬೆಳಾ ರಚನೆ ಮತ್ತು ನಿರ್ದೇಶನದ ಕೊಂಕಣಿ ಸಿನಿಮಾ ಬಾಪಾಚೆ ಪುತಾಚೆ ನಾಂವಿಂ ಪ್ರದರ್ಶನವಾಗಲಿದೆ. ಉದ್ಯಾವರ ಗುಡ್ಡೆಅಂಗಡಿಯಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ವಠಾರದಲ್ಲಿರುವ ಕ್ಸೇವಿಯರ್ ಸಭಾಭವನದಲ್ಲಿ ಪ್ರತಿದಿನ 6.30ಕ್ಕೆ ಈ ಸಿನಿಮಾಗಳು ಉಚಿತ ಪ್ರವೇಶದೊಂದಿಗೆ ನಡೆಯಲಿದೆ.

Additional image
23 Jul 2026, 11:46 AM
Category: Kaup
Tags: