ಕಾಪು : ಜೇಸಿಐ ವಲಯ 15ರ ಘಟಕಗಳಲ್ಲಿ ಒಂದಾಗಿರುವ ಜೇಸಿಐ ಕಾಪು ಘಟಕದ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಅಂಗವಾಗಿ, ಜೇಸಿಐ ಕಾಪು ಘಟಕ ಹಾಗೂ ಗ್ರೀನ್‌ವುಡ್ ರೆಸಾರ್ಟ್ ವತಿಯಿಂದ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಕಾಪು ಪೊಲೀಸ್ ಠಾಣೆಗೆ 2 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಆರಕ್ಷಕರ ಠಾಣೆಯ ಪೊಲೀಸ್ ತನಿಖಾಧಿಕಾರಿ ಶುಭಕರ್ ಮತ್ತು ಸಹಾಯಕ ಪೊಲೀಸ್ ಉಪ ನಿರೀಕ್ಷಕ ರವೀಶ್ ಹೊಳ್ಳ ಅವರು ಕೃತಜ್ಞತೆ ಸಲ್ಲಿಸಿದರು.
ಬಳಿಕ ಕಾಪು ಜೇಸಿ ಭವನದಲ್ಲಿ ವಲಯಾಧ್ಯಕ್ಷರ ಅಧಿಕೃತ ಭೇಟಿ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು, ಜೇಸಿಐ ಕಾಪು ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಈ ಹಿಂದೆ ಕಾಪು ಘಟಕದ ಆತಿಥ್ಯದಲ್ಲಿ ನಡೆದ ಮಧ್ಯಂತರ ವಲಯ ಸಮ್ಮೇಳನದ ಯಶಸ್ಸನ್ನು ಸ್ಮರಿಸಿದ ಅವರು, ಮುಂದಿನ ದಿನಗಳಲ್ಲಿಯೂ ಘಟಕವು ಇನ್ನಷ್ಟು ಉತ್ತಮ ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಿದರು.
ತುಳುನಾಡಿನ ಸಂಸ್ಕೃತಿಯ ಅನಾವರಣಕ್ಕಾಗಿ ತುಳುನಾಡಿನ ಸಾಂಪ್ರದಾಯಿಕ ‘ಆಟಿದ ತಮ್ಮನ’ ಆಚರಣೆಯನ್ನು ವಿಶಿಷ್ಟವಾಗಿ ನೆರವೇರಿಸಲಾಯಿತು.
ಕಲಸೆಗೆ ಕುರುವೆಯಲ್ಲಿ ಅಕ್ಕಿಯನ್ನು ತುಂಬಿಸಿ, ಹಿಂಗಾರವನ್ನು ಇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ತುಳುವಪ್ಪೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಪೂರ್ವ ವಲಯ ಅಧ್ಯಕ್ಷ ರಾಕೇಶ್ ಕುಂಜೂರು ಅವರು ತುಳುವರ ಆಟಿ ತಿಂಗಳು ಹಾಗೂ ಅದರ ವಿಶೇಷ ಆಚರಣೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾಗಿ ಭೇಟಿ ನೀಡಿದ ಸಂತೋಷ್ ಶೆಟ್ಟಿ ಮತ್ತು ಜೇಸಿಐ ಆಯೋಜಿಸುವ ಮೌನ ಸಾಧಕರ ಸಾಧನೆಯ ಸನ್ಮಾನಕ್ಕಾಗಿ ರಾಷ್ಟ್ರಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಗಾಯನ್ ಸಿ. ಸುವರ್ಣ ಹಾಗೂ "ಆಟಿದ ತಮ್ಮನ" ಅಂಗವಾಗಿ ತುಳು ಲಿಪಿ ಕಲಿಕೆಗೆ ವಿಶೇಷ ಕೊಡುಗೆ ನೀಡಿರುವ ಅಕ್ಷತಾ ಜ್ಞಾನೇಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಪ್ರಶ್ನೆಗಳನ್ನು ಕೇಳಲಾಗಿದ್ದು, ಸರಿಯಾದ ಉತ್ತರ ನೀಡಿದವರಿಗೆ ಬಹುಮಾನ ವಿತರಿಸಲಾಯಿತು. ಘಟಕದ ಸದಸ್ಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿ ತಂದಿದ್ದ ವಿವಿಧ ಬಗೆಯ ಸಾಂಪ್ರದಾಯಿಕ ತುಳುನಾಡಿನ ಖಾದ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಯಿತು.
ಕಾರ್ಯಕ್ರಮದಲ್ಲಿ ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು, ವಲಯ ಉಪಾಧ್ಯಕ್ಷ ಅರುಣ್ ಮಾಂಜ, ವಲಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಲೂಯಿಸ್ ಮಸ್ಕರೇನಸ್, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ಕಾರ್ಯದರ್ಶಿ ಶೃತಿ ಶೆಟ್ಟಿ, ಲೇಡಿ ಜೆಸಿ ಸಂಯೋಜಕಿ ಕವಿತಾ ಕುಂದರ್, ಗ್ರೀನ್ ವುಡ್ ರೆಸಾರ್ಟ್ ಮಾಲಕ ದೀಪಕ್ ಕುಮಾರ್ ಎರ್ಮಾಳ್, ‘ಆಟಿದ ತಮ್ಮನ’ ನಿರ್ದೇಶಕಿ ಸುಖಲಾಕ್ಷಿ ಬಂಗೇರ, ಸಹ ನಿರ್ದೇಶಕಿ ಸತ್ಯವತಿ ಬಂಗೇರ, ಜೂನಿಯರ್ ಜೆಸಿ ಅಧ್ಯಕ್ಷ ಮನ್ವಿತ್ ಬಂಗೇರ ಸೇರಿದಂತೆ ಜೇಸಿಐ ಕಾಪು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
