ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜಿಲ್ಲೆಯ ಕರಕುಶಲ, ವೈಶಿಷ್ಠ ಪೂರ್ಣ ವಸ್ತುಗಳ ರಫ್ತು ಕುರಿತು ನೀಲ ನಕಾಶೆ : ಜಿಲ್ಲಾಧಿಕಾರಿ ಕೂರ್ಮಾರಾವ್

Posted On: 27-09-2021 11:24PM

ಉಡುಪಿ : ಜಿಲ್ಲೆಯಲ್ಲಿ ದೊರೆಯುವ ಮತ್ತು ಉತ್ಪಾದಿಸುವ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಸೇರಿದಂತೆ ವಿವಿಧ ವೈಶಿಷ್ಠ ಪೂರ್ಣ ವಸ್ತುಗಳನ್ನು ಬ್ರಾಂಡಿಂಗ್ ಮಾಡಿ, ರಫ್ತು ಮಾಡಲು ನೀಲ ನಕಾಶೆ ಸಿದ್ದಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ, ವಾಣಿಜ್ಯ ಸಪ್ತಾಹದ ಅಂಗವಾಗಿ ಮಣಿಪಾಲದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ರಫ್ತುದಾರರ ಸಮಾವೇಶ ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಕ್ಯಾಶ್ಯೂವನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ ಆದರೆ ಜಿಲ್ಲೆಯಲ್ಲಿ ಕ್ಯಾಶ್ಯೂ ಹೊರತು ಪಡಿಸಿ ವಿವಿಧ ಕರಕುಶಲ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು ಇದರೊಂದಿಗೆ ಮರೈನ್ ಉತ್ಪನ್ನಗಳನ್ನೂ ಸಹ ರಫ್ತು ಮಾಡಲು ಉದ್ದಿಮೆದಾರರು ಪ್ರಯತ್ನಿಸಬೇಕು, ಜಿಲ್ಲೆಯ ವೈಶಿಷ್ಠ ಪೂರ್ಣ ಉತ್ಪನ್ನಗಳನ್ನು ಬ್ರಾಂಡಿಂಗ್ ಮಾಡಲು ಮತ್ತು ಅವುಗಳನ್ನು ರಫ್ತು ಮಾಡಲು ನೀಲಿ ನಕಾಶೆ ಸಿದ್ದಪಡಿಸಲಾಗುವುದು ಎಂದರು. ಈ ಕಾರ್ಯಗಾರದ ಮೂಲಕ ರಫ್ತು ಮಾಡುವ ಕಾರ್ಯದಲ್ಲಿ ಅಗತ್ಯವಾಗಿ ಬೇಕಿರುವ ಅನುಮತಿ ಮತ್ತಿತರ ಅವಶ್ಯಕತೆಗಳ ಕುರಿತ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸಂಬಂದಿಸಿದ ಸಮಸ್ಯೆಗಳನ್ನು ಸಿಂಗಲ್ ವಿಂಡೋ ವ್ಯವಸ್ಥೆ ಮೂಲಕ ಬಗೆಹರಿಸಲಾಗುತ್ತಿದೆ ಎಂದರು.

ಕೆನರಾ ಬ್ಯಾಂಕ್ ಮುಖ್ಯ ಪ್ರಬಂದಕ ರಾಮಾ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಕ್ಯಾಶ್ಯೂ ಮತ್ತು ಮೀನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿದ್ದು, ರಫ್ತು ಮಾಡಲು ಇತರ ಸಂಪನ್ಮೂಲಗಳೂ ಸಹ ಜಿಲ್ಲೆಯಲ್ಲಿದ್ದು ಉತ್ತಮ ರಸ್ತೆ, ಜಲ ಮತ್ತು ವಾಯು ಸಾರಿಗೆ ವ್ಯವಸ್ಥೆ ಕೂಡ ಇದ್ದು, ಉದ್ದಿಮೆದಾರರು ಇದರ ಪ್ರಯೋಜನ ಪಡೆಯಬೇಕು, ಕೆನರಾ ಬ್ಯಾಂಕ್ ವತಿಯಿಂದ ರಫ್ತು ಉದ್ದಿಮೆಗಳಿಗೆ ಎಲ್ಲಾ ರೀತಿಯ ನೆರವನ್ನೂ ನೀಡಲಾಗುವುದು ಎಂದರು.

ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಉಡುಪಿ ನೋಡೆಲ್ ಅಧಿಕಾರಿ ರಮಾನಂದ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಕ್ಯಾಶ್ಯೂ ಉತ್ಪಾದಕ ಸಂಘದ ಅಧ್ಯಕ್ಷ ಸಂತೋಷ್ ಡಿಸಿಲ್ವಾ, ಉಡುಪಿ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಬಾಳಿಗ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಸ್ವಾಗತಿಸಿದರು.