ಸಿ ಆರ್ ಝಡ್ ಅಧಿಸೂಚನೆ ೨೦೧೯ ರಲ್ಲಿ ಹೆಚ್ಚಿನ ಚಟುವಟಿಕೆಗೆ ಅವಕಾಶ : ಜಿಲ್ಲಾಧಿಕಾರಿ ಕೂರ್ಮಾರಾವ್
Posted On:
28-09-2021 08:10PM
ಉಡುಪಿ : ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ ೨೦೧೯ರಲ್ಲಿ ಅಭಿವೃಧ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಹೆಚ್ಚಿನ ರಿಯಾಯಿತಿಗಳು ದೊರೆಯಲಿದ್ದು, ಈ ಕುರಿತು ತಯಾರಿಸಿದ ಕರಡು ಯೋಜನೆಯ ಕುರಿತಂತೆ ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ ೨೦೧೯ರ ಪ್ರಕಾರ ತಯಾರಿಸಿದ, ಕರಡು ಕರಾವಳಿ ವಲಯ ನಿರ್ವಹಣಾ ಯೋಜನೆಯ ಸಾರ್ವಜನಿಕ ಅಹವಾಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಡು ಯೋಜನೆಯಲ್ಲಿ, ಉಬ್ಬರವಿಳಿತದ ಪ್ರಭಾವಕ್ಕೆ ಒಳಗಾದ ಜಲನಿಕಾಯಗಳ ಭರತರೇಖೆಯಿಂದ ೧೦೦ಮೀ ವರೆಗೆ ಇದ್ದ ಸಿಆರ್ಝಡ್ ಪ್ರದೇಶವನ್ನು ೫೦ಮೀ. ಗೆ ಕಡಿಮೆಗೊಳಿಸಿದೆ, ಕುದ್ರು ದ್ವೀಪಗಳಿಗೆ ಇದ್ದ ೧೦೦ ಮೀ ವರೆಗೆ ಇದ್ದ ಸಿಆರ್ಝಡ್ ಪ್ರದೇಶವನ್ನು ೨೦ ಮೀ ಗೆ ಕಡಿಮೆಗೊಳಿಸಿದೆ, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಅಥವಾ ಸ್ಥಳೀಯ ನಗರಾಭಿವೃಧ್ದಿ ಯೋಜನಾ ಪ್ರಾಧಿಕಾರಕ್ಕೆ ಸೇರಿಸಿ ಘೋಷಣೆಯಾದ ಗ್ರಾಮಗಳನ್ನು ಕರಾವಳಿ ನಿಯಂತ್ರಣ ವಲಯ ೩ ರಿಂದ ೨ ಕ್ಕೆ ಬದಲಾಯಿಸಲಾಗಿದೆ, ೨೦೧೧ ರ ಜನಗಣತಿ ಆಧಾರದ ಮೇಲೆ ಚದುರ ಕಿ.ಮೀಗೆ ೨೧೬೧ ಕ್ಕಿಂತ ಹೆಚ್ಚಿನ ಜನಸಂಖ್ಯೆಯುಳ್ಳ ಗ್ರಾಮಗಳನ್ನು ಕರಾವಳಿ ನಿಯಂತ್ರಣ ವಲಯ ೩ಎ ಎಂದು ವಿಂಗಡಿಸಿ, ಅಭಿವೃದ್ದಿ ನಿಷಿದ್ದ ಪ್ರದೇಶದ ವ್ಯಾಪ್ತಿಯನ್ನು ಸಮುದ್ರದ ಭರತ ರೇಖೆಯಿಂದ ೫೦ ಮೀ ಗೆ ಸೀಮಿತಗೊಳಿಸಲಾಗಿದೆ ಎಂದರು.
ಕರಡು ನಕಾಶೆಯಲ್ಲಿ ಜಿಲ್ಲೆಯ ಕೋಟೆ, ಮಟ್ಟು, ಪಾಂಗಾಳ, ಬಡಾ, ಬೈಂದೂರು, ಪಡುವರಿ, ಯಡ್ತರೆ, ತಗ್ಗರ್ಸೆ ಗ್ರಾಮಗಳನ್ನು ಕರಾವಳಿ ನಿಯಂತ್ರಣ ವಲಯ ೩ ರಿಂದ ೨ ಕ್ಕೆ ಸೇರಿಸಿರುವುದರಿಂದ ಈ ಪ್ರದೇಶದಲ್ಲಿ ಅಭಿವೃದ್ದಿ ಚಟುವಟಿಕೆಗಳನ್ನು ನಡೆಸಲು ಹೆಚ್ಚಿನ ರಿಯಾಯತಿ ದೊರೆಯಲಿದೆ, ಗಂಗೊಳ್ಳಿ ಗ್ರಾಮವನ್ನು ಕರಾವಳಿ ನಿಯಂತ್ರಣ ವಲಯ ೩ಎ ಗೆ ಸೇರಿಸಲಾಗಿದೆ ಎಂದರು.
ಸೀಗಡಿ ಕೃಷಿಕ ಸಂಘದ ಕಾರ್ಯದರ್ಶಿ ಶ್ರೀಧರ ಹೆಗಡೆ ಹಾಗೂ ಹಂಗಳೂರು ಗ್ರಾಮದ ಸೀಗಡಿ ಕೃಷಿಕರು, ಸೀಗಡಿ ಬೆಳೆಯುವ ಪ್ರದೇಶವನ್ನು ವೈಮಾನಿಕ ಸಮೀಕ್ಷೆಯಲ್ಲಿ ಹೊಳೆ ಎಂದು ಪರಿಗಣಿಸಿದ್ದು, ಇದರಿಂದ ಸೀಗಡಿ ಕೃಷಿಗೆ ತೊಂದರೆಯಾಗಲಿದೆ ಈ ಬಗ್ಗೆ ಪರಿಶೀಲಿಸುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಸೀಗಡಿ ಕೃಷಿಗೆ ಯೋಜನೆಯಿಂದ ಯಾವುದೇ ತೊಂದರೆಯಿಲ್ಲ, ಹೊಸದಾಗಿ ಸೀಗಡಿ ಕೃಷಿ ಮಾಡುವವರು ಅನುಮತಿ ಪಡೆಯಬೇಕಾಗುತ್ತದೆ, ಈಗಾಗಲೇ ಮಾಡುತ್ತಿರುವವರು ನವೀಕರಣ ಮಾಡಬೇಕು. ಸೀಗಡಿ ಕೃಷಿಗೆ ಅನುಮತಿ ನೀಡಲಾಗುತ್ತದೆ. ಹೊಳೆ ಎಂದು ನಮೂದಿಸಿರುವುದನ್ನು ಸರಿಪಡಿಸಲಾಗುವುದು ಎಂದರು.
ಹೇರಿಕುದ್ರು, ಕನ್ನಡಕುದ್ರುಗಳಲ್ಲಿ ಹೊಳೆ ಮಧ್ಯೆ ಕಾಂಡ್ಲಾ ಗಿಡಗಳನ್ನು ನೆಟ್ಟಿರುವ ಕಾರಣ ನೀರು ಹರಿಯಲು ತೊಂದರೆಯಾಗಿ ಮರಳು ಶೇಖರಣೆಯಾಗಿದೆ, ಇದರಿಂದ ಹರಿಯುವ ನೀರು ಗ್ರಾಮಗಳಿಗೆ ಹಿಮ್ಮುಖವಾಗಿ ಬಂದು ಪ್ರವಾಹ ಪರಿಸ್ಥಿತಿ ಬರಲಿದ್ದು ಕೂಡಲೇ ಅಲ್ಲಿರುವ ಮರಳು ದಿಬ್ಬ ತೆರವುಗೊಳಿಸುವಂತೆ ಗ್ರಾಮಸ್ಥರು ಕೋರಿದರು.
ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್ ಮಾತನಾಡಿ, ಸಿಆರ್ಝಡ್ ನಿಂದ ಮೀನುಗಾರರಿಗೆ ಯಾವುದೇ ತೊಂದರೆಯಾಗದಂತೆ ನಿಯಮಗಳನ್ನು ರೂಪಿಸಬೇಕು, ನಕ್ಷೆಯಲ್ಲಿ ಗಂಗೊಳ್ಳಿ, ಹಂಗಾರಕಟ್ಟೆ ಮತ್ತು ಹೆಜಮಾಡಿ ಪೋರ್ಟ್ಗಳನ್ನು ಗುರುತಿಸಬೇಕು ಎಂದರು.
ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅಹವಾಲುಗಳನ್ನು ರಾಜ್ಯಕ್ಕೆ ಕಳುಹಿಸಲಾಗುವುದು ಅಲ್ಲಿಂದ ಅದು ಅಗತ್ಯ ಬದಲಾವಣೆಯಾಗಿ ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.
ಕಾರ್ಯಕ್ರಮದಲ್ಲಿ ಸಿ.ಆರ್.ಝಡ್ ಪ್ರಾದೇಶಿಕ ನಿರ್ದೇಶಕ ಶ್ರೀಪತಿ ಬಿ.ಎಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.