ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುತ್ಯಾರು : ರೇಬಿಸ್ ಜಾಗೃತಿ ಶಿಬಿರ

Posted On: 02-10-2021 02:30PM

ಕಾಪು : ಕಾಯಿಲೆಗಳು ಕೇವಲ ನಾಯಿಗಳಿಗೆ ಮಾತ್ರವಲ್ಲದೆ ದನ, ಬೆಕ್ಕು ಇನ್ನಿತರ ಸಾಕು ಪ್ರಾಣಿಗಳಿಗೂ ಬರುವ ಲಕ್ಷಣಗಳು ಇರುವುದರಿಂದ ಅತಿಯಾಗಿ ಸಾಕುಪ್ರಾಣಿಗಳನ್ನು ಮುದ್ದಿಸುವುದರಿಂದ ಕಾಯಿಲೆಗಳು ಹರಡುವ ಭೀತಿ ಇರುತ್ತದೆ. ಪ್ರಾಣಿಗಳ ರೋಮ ಹಾಗೂ ಜೊಲ್ಲಿನಿಂದ ರೋಗ ಬರುವ ಲಕ್ಷಣ ಇರುವುದರಿಂದ ಹೆಚ್ಚಾಗಿ ಮಕ್ಕಳು ಜಾಗೃತರಾಗಬೇಕಾಗಿದೆ ಎಂದು ಶಿರ್ವ ಪಶು ಚಿಕಿತ್ಸಾಲಯದ ಡಾ| ಅರುಣ್ ಹೆಗ್ಡೆ ಹೇಳಿದರು. ಅವರು ಜಿ.ಪಂ.ಉಡುಪಿ, ಪಶುಪಾಲನಾ ಹಾಗು ಪಶು ವೈದ್ಯ ಸೇವಾ ಇಲಾಖೆ ಉಡುಪಿ, ಆಜಾದೀಕಾ ಅಮೃತ ಮಹೋತ್ಸವ ಅಂಗವಾಗಿ ಪಶು ಚಿಕಿತ್ಸಾಲಯ ಶಿರ್ವ, ಕುತ್ಯಾರು ಗ್ರಾ.ಪಂ, ರೋಟರಿ ಕ್ಲಬ್ ಶಿರ್ವ, ಸೂರ್ಯ ಚೈತನ್ಯ ಗ್ಲೋಬಲ್ ಸ್ಕೂಲ್ ಕುತ್ಯಾರು ಇವರ ಸಂಯುಕ್ತ ಆಶ್ರಯದಲ್ಲಿ ಸೂರ್ಯ ಚೈತನ್ಯ ಗ್ಲೋಬಲ್ ಸ್ಕೂಲ್ ಇಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ರೇಬಿಸ್ ಜಾಗೃತಿ ಶಿಬಿರದ ಅನುವುಗಾರರಾಗಿ ಮಾತನಾಡಿದರು.

ಸೂರ್ಯ ಚೈತನ್ಯ ಗ್ಲೋಬಲ್ ಸ್ಕೂಲ್ ನ ವ್ಯವಸ್ಥಾಪನಾ ಆಡಳಿತ ನಿರ್ದೇಶಕ ಶಂಭುದಾಸ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿ ಶುಭಾಶಂಸನೆಗೈದರು. ಪಶು ಪಕ್ಷಿಗಳಿಗೆ ಬರಬಹುದಾದ ಕಾಯಿಲೆಗಳನ್ನು ಎಳೆಯ ಮಕ್ಕಳಿಗೆ ತಿಳಿ ಹೇಳುವ ಇಂತಹ ಕಾರ್ಯಕ್ರಮ ಅದ್ಭುತ ಎಂದರು.

ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಎಸ್. ಆಚಾರ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿರ್ವ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಕೃಷ್ಣ ಆಳ್ವ ಮಾತನಾಡಿ ಸಮಾಜಕ್ಕೆ ಉತ್ತಮ ಮಾಹಿತಿ ಹಾಗು ಸಹಕಾರಿ ನೀಡಬಲ್ಲ ಇಂತಹ ಒಳ್ಳೆಯ ಕಾರ್ಯಕ್ರಮಗಳಿಗೆ ರೋಟರಿ ಸಂಸ್ಥೆಯು ನೆರವು ನೀಡಲು ಸಿದ್ಧ ಎಂದರು.

ಕಾರ್ಯಕ್ರಮದಲ್ಲಿ ಕುತ್ಯಾರು ಗ್ರಾ.ಪಂ. ಸದಸ್ಯ ಸಂಪತ್ ಕುಮಾರ್, ಪಿಡಿಒ ರಜನಿ ಭಟ್, ಶಿಕ್ಷಕ ವೃಂದ, ಪಶು ಇಲಾಖೆಯ ಶಿವ ಪುತ್ರಯ್ಯ, ಗುರುಸ್ವಾಮಿ ಉಪಸ್ಥಿತರಿದ್ದರು. ಪಶು ಇಲಾಖೆಯ ವಸಂತ ಮಾದಾರ್ ಸ್ವಾಗತಿಸಿ, ಶಾಲಾ ಪ್ರಾಂಶುಪಾಲ ಗುರುದತ್ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿ, ಶಿರ್ವ ರೋಟರಿ ಕ್ಲಬ್ ನ‌ ಕಾರ್ಯದರ್ಶಿ ಜಿನೇಶ್ ಬಲ್ಲಾಳ್ ವಂದಿಸಿದರು.