ಗಾಂಧೀಜಿ ಆಶಯದ ಸ್ವಚ್ಛ ಭಾರತ ಕಲ್ಪನೆ ಸಾಕಾರಗೊಂಡಿದೆ : ರಘುಪತಿ ಭಟ್
Posted On:
02-10-2021 09:19PM
ಉಡುಪಿ : ಮಹಾತ್ಮಗಾಂಧೀಜಿ ಅವರ ತತ್ವ ಮತ್ತು ಚಿಂತನೆಗಳಲ್ಲಿ ಸ್ವಚ್ಛತೆಯೂ ಒಂದಾಗಿದ್ದು, ಅವರ ಆಶಯದಂತೆ ದೇಶದಾದ್ಯಂತ ಪ್ರತಿಯೊಬ್ಬ ಭಾರತೀಯನ ಚಿಂತನೆ ಸ್ವಚ್ಛ ಭಾರತ ಕಡೆಗೆ ತಿರುಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಅವರು ಇಂದು ಅಜ್ಜರಕಾಡು ಭುಜಂಗಪಾರ್ಕ್ನಲ್ಲಿ ನಗರಸಭೆ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ , ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿ ಅವರ ಚಿಂತನೆಯಂತೆ ಸ್ವಚ್ಛತೆ ಸುತ್ತಮುತ್ತಲಿನ ಪರಿಸರದಲ್ಲಿ ಮಾತ್ರವಲ್ಲದೇ ಪ್ರತಿಯೊಬ್ಬರ ಮನದಲ್ಲೂ ಮೂಡಬೇಕು ,ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಗಾಂಧೀಜಿ ಅವರ 150 ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ನೀಡಿದ ಕರೆಯಂತೆ ದೇಶದಾದ್ಯಂತ ಸ್ವಚ್ಛತಾ ಅಭಿಯಾನ ಆರಂಭಗೊಂಡಿದೆ. ಉಡುಪಿಯನ್ನು ಸ್ವಚ್ಛ ಉಡುಪಿ ಮಾಡಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಿದೆ ಎಂದರು.
ಸ್ವಚ್ಛ ಭಾರತ್ ಮಿಷನ್-ನಗರ ಮತ್ತು ಅಮೃತ್ 2 ನೇ ಹಂತದ ಯೋಜನೆಯಂತೆ, ರಾಷ್ಟ್ರಾದ್ಯಂತ ಇರುವ ಕಸದ ಗುಡ್ಡೆಗಳನ್ನು ಸಮರ್ಪಕ ರೀತಿಯಲ್ಲಿ ತೆರವುಗೊಳಿಸಲು ಕೇಂದ್ರ ಸರ್ಕಾರ ನೆರವು ನೀಡಲಿದ್ದು, ಈ ಯೋಜನೆಯಡಿ ಉಡುಪಿಯ ಕರ್ವಾಲ್ ನಲ್ಲಿರುವ ಕಸದ ಗುಡ್ಡೆಯನ್ನು ಸೂಕ್ತ ರೀತಿಯಲ್ಲಿ ತೆರವು ಮಾಡಬೇಕಿದೆ. ಮತ್ತು ತ್ಯಾಜ್ಯದಿಂದ ನದಿ ನೀರು ಕಲುಷಿತಗೊಳ್ಳುವುದನ್ನು ತಡೆಯಲೂ ಸಹ ಕೇಂದ್ರ ನೆರವು ನೀಡಲಿದ್ದು, ಇದರಡಿಯಲ್ಲಿ ಉಡುಪಿಯಲ್ಲಿ ಒಳಚರಂಡಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ಇಂದ್ರಾಣಿ ನದಿಯನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕಿದೆ. ಈಗಾಗಲೇ ಉಡುಪಿಯ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಲು 320 ಕೋಟಿ ರೂ ಗಳ ಡಿಪಿಆರ್ ಸಲ್ಲಿಕೆಯಾಗಿದ್ದು, ಮಂಡಳಿಯಲ್ಲಿ ಮಂಜೂರಾತಿ ಕೂಡಾ ದೊರೆತಿದೆ. ನಗರಸಭೆ ವತಿಯಿಂದ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ,ನಗರವನ್ನು ಇನ್ನಷ್ಟು ಸ್ವಚ್ಛತೆಯಿಂದ ಕೂಡಿರುವಂತೆ ಮಾಡಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಮಹಾತ್ಮ ಗಾಂಧೀ ಅವರ ಜಯಂತಿ ಜೊತೆಯಲ್ಲಿ ಇಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕೂಡಾ ಆಚರಿಸಲಾಗುತ್ತಿದೆ. ಈ ಇಬ್ಬರೂ ಮಹಾನ್ ವ್ಯಕ್ತಿಗಳ ಸರಳ ಜೀವನ ಮಾದರಿಯಾದುದು, ಗಾಂಧೀಜಿ ಅವರು ನನ್ನ ಜೀವನವೇ ಸಂದೇಶ ಎಂದಿದ್ದರು, ಶಾಂತಿ ಮತ್ತು ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಾ ಗಾಂಧೀಜಿ ಅವರ ಜಯಂತಿಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಗಾಂಧೀ ಜಯಂತಿಯ ಅಂಗವಾಗಿ ಅಕ್ಟೋಬರ್ 1 ರಿಂದ 31 ರ ವರೆಗೆ ಕ್ಲೀನ್ ಇಂಡಿಯಾ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯ ಪ್ರತೀ ಮನೆಗಳಲ್ಲಿರುವ ಅನುಪಯುಕ್ತ ಪ್ಲಾಸ್ಟಿಕ್ ನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಉಡುಪಿ ಜಿಲ್ಲೆಯನ್ನಾಗಿ ಮಾಡುವ ಆಭಿಯಾನ ನಡೆಯುತ್ತಿದ್ದು , ಸಾರ್ವಜನಿಕರು ಈ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದರ ಮೂಲಕ ಉಡುಪಿ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್,ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಮತ್ತಿತರರು ಉಪಸ್ಥಿತರಿದ್ದರು.
ಪೌರಾಯುಕ್ತ ಉದಯ ಶೆಟ್ಟಿ ಸ್ವಾಗತಿಸಿದರು. ನಗರಸಭೆ ಎಂಜಿನಿಯರ್ ಮೋಹನ್ ರಾಜ್ ವಂದಿಸಿದರು,ಧನಂಜಯ ನಿರೂಪಿಸಿದರು.
ಕಾರ್ಯಕ್ರಮದ ನಂತರ , ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕ್ಲೀನ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಸ್ತೆ ಬದಿಯಲ್ಲಿ ಬಿದ್ದಿದ್ದ ಅನುಪಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ,ವಿಲೇವಾರಿ ಮಾಡಲಾಯಿತು.