ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟ್ವಾಳದಲ್ಲಿ ತುಲು ಲಿಪಿ ನಾಮಫಲಕ ಅನಾವರಣ

Posted On: 10-10-2021 07:50PM

ಮಂಗಳೂರು : ವಿಶ್ವ ತುಲು ಲಿಪಿ ದಿನವಾದ ಅಕ್ಟೋಬರ್ 10 ರಂದು ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟುವಿನಲ್ಲಿ ಯುವಜನ ವ್ಯಾಯಾಮ ಶಾಲೆಯ ನಾಮಫಲಕವನ್ನು ತುಲು ಲಿಪಿಯಲ್ಲಿ ಹಾಕಲಾಯಿತು. ತುಲು ಲಿಪಿ ಶಿಕ್ಷಕರು ಹಾಗೂ ಜೈ ತುಲುನಾಡ್ (ರಿ.) ಸಂಘಟನೆಯ ಉಪ ಸಂಘಟನಾ ಕಾರ್ಯದರ್ಶಿಯಾದ ಜಗದೀಶ ಗೌಡ ಕಲ್ಕಳ ಇವರು ತುಲು ಲಿಪಿ ನಾಮಫಲಕವನ್ನು ಅನಾವರಣಗೊಳಿಸಿದರು. ಹಾಗೆಯೇ ತುಲು ಲಿಪಿ ದಿನದ ವಿಶೇಷತೆ ಹಾಗೂ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟುಹಬ್ಬವನ್ನು ತುಲು ಲಿಪಿ ದಿನವಾಗಿ ಆಚರಿಸುವುದರ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತುಲು ಲಿಪಿಯಲ್ಲಿ ನಾಮಫಲಕವನ್ನು ಬರೆದ ಜಯ ಆರ್ಟ್ಸ್‌ನ ಜಯರಾಮ, ಯುವಜನ ವ್ಯಾಯಾಮ ಶಾಲೆ ಭಂಡಾರಿಬೆಟ್ಟು ಇದರ ಅಧ್ಯಕ್ಷರಾದ ಹೆನ್ರಿ ಪಿರೇರಾ ಉಪಸ್ಥಿತಿ ಇದ್ದರು.

ತುಲುನಾಡ ಯುವಸೇನೆ ಬಂಟ್ವಾಳ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ತುಲು ಲಿಪಿ ಶಿಕ್ಷಕರಾದ ಪೃಥ್ವಿ ತುಲುವೆ ಕಾರ್ಯಕ್ರಮವನ್ನು ನಿರೂಪಿಸಿದರು. ನಾಮಫಲಕ ಅನಾವರಣದ ನಂತರ ಜೈ ತುಲುನಾಡ್ (ರಿ.), ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಲುನಾಡ ಯುವಸೇನೆ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ನಡೆದ ಬಲೆ ತುಲು ಲಿಪಿ ಕಲ್ಪುಗ ಕಾರ್ಯಾಗಾರದ ತುಲು ಲಿಪಿ ಪರೀಕ್ಷೆ ನಡೆಯಿತು. ತುಲು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ, ಪೂರ್ಣಿಮಾ ಬಂಟ್ವಾಳ ಮತ್ತು ಪೃಥ್ವಿ ತುಲುವೆ ಪರೀಕ್ಷೆಯನ್ನು ನಡೆಸಿಕೊಟ್ಟರು.