ಮಕ್ಕಳಿಗೆ ಕೋವಿಡ್ ಲಸಿಕೆಗೆ ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ : ಮುಖ್ಯಮಂತ್ರಿ ಬೊಮ್ಮಾಯಿ
Posted On:
13-10-2021 07:47PM
ಉಡುಪಿ: ರಾಜ್ಯದಲ್ಲಿ 2ರಿಂದ 18ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರ ಕೊನೆಯ ಸರ್ಟಿಫಿಕೇಶನ್ ನ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಾವೀಗ ಮಕ್ಕಳ ರಕ್ಷಣೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಲಭಿಸಿದ ತಕ್ಷಣ ಲಸಿಕೆ ನೀಡುತ್ತೇವೆ ಎಂದರು.
ಈಗಾಗಲೇ ನಾವು ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಶೇ. 82ರಷ್ಟು ಸಾಧನೆ ಮಾಡಿದ್ದೇವೆ. ಅಲ್ಲದೇ ಎರಡನೇ ಡೋಸ್ ಲಸಿಕೆ ಶೇ. 36-37ರಷ್ಟು ಕೊಟ್ಟಿದ್ದೇವೆ. ಡಿಸೆಂಬರ್ ಅಂತ್ಯದ ವೇಳೆಗೆ ಶೇ. 90ರಷ್ಟು ಮೊದಲ ಡೋಸ್ ಮತ್ತು ಶೇ. 70ರಷ್ಟು ಎರಡನೇ ಡೋಸ್ ನೀಡುತ್ತೇವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಆಗಿದೆ. ಮತಾಂತರ ನಿಷೇಧ ಕಾಯ್ದೆ ತರುವ ಬಗ್ಗೆಯೂ ನಾವು ಸಾಕಷ್ಟು ಚಿಂತನೆ ಮಾಡಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿರುವ ಕಾನೂನನ್ನು ಅಭ್ಯಾಸ ಮಾಡುತ್ತೇವೆ. ಶೀಘ್ರವೇ ಮತಾಂತರ ನಿಷೇಧ ಕಾನೂನು ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.