ಬೈಂದೂರು : ವಿಜಯದಶಮಿ ದಿನದಂದೇ ನಾಡ ಕೊರಗ ಕಾಲೋನಿಯಲ್ಲಿ ಅಗ್ನಿ ದುರಂತ, ಸಂಪೂರ್ಣ ಮನೆ ಭಸ್ಮ
Posted On:
16-10-2021 07:44PM
ಉಡುಪಿ : ವಿಜಯದಶಮಿಯ ದಿನ ಊರೆಲ್ಲಾ ಸಂಭ್ರಮದಿಂದ ಹಬ್ಬ ಮಾಡುತ್ತಿರುವಾಗ ನಿನ್ನೆ ನಾಡ, ಪಡುಕೋಣೆ ಹೈಸ್ಕೂಲ್ ಎದುರುಗಡೆ ಇರುವ ಕೊರಗ ಕಾಲೋನಿಯ ನಿವಾಸಿ ಶ್ರೀಮತಿ ಸುನೀತಾ ರ ವರ ಮನೆ ಬೆಂಕಿಗೆ ಆಹುತಿಯಾಗಿ ತನ್ನ ಸೂರು ಕಳೆದುಕೊಂಡು ದಿಕ್ಕು ತೋಚದೆ ಮುಂದೇನು ಗತಿ ಎಂದು ಈ ಬಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.
ಈ ಘಟನೆಯ ಬಗ್ಗೆ ಸುನೀತಾರವರನ್ನು ಕೇಳಿದಾಗ ದಿನನಿತ್ಯ ಕೆಲಸ ಕಾರ್ಯಗಳನ್ನು ಮುಗಿಸಿ ದೇವರಿಗೆ ದೀಪ ಹಚ್ಚಿ ಮಧ್ಯಾಹ್ನ ಹತ್ತಿರದಲ್ಲಿರುವ ಸಂಬಂಧಿ ಮನೆಗೆ ಹೋಗಿದೆ. ಸರಿಸುಮಾರು ಮಧ್ಯಾಹ್ನ 12 ಘಂಟೆ ಹೊತ್ತಿಗೆ ಪಕ್ಕದ ಮನೆಯವರು ಬಂದು ನಿಮ್ಮ ಮನೆಯಲ್ಲಿ ಬೆಂಕಿ ಹತ್ತಿಕೊಂಡು ಹೊಗೆ ಬರುತ್ತಿದೆ ಎಂದು ಹೇಳಿದರು. ಕೂಡಲೇ ಅಕ್ಕಪಕ್ಕದವರೆಲ್ಲ ಸೇರಿ ಬೆಂಕಿ ಆರಿಸಲು ಹರಸಾಹಸ ಪಟ್ಟರು, ಅಲ್ಲದೇ ಮನೆ ಒಳಗಡೆ ಇರುವ ಗ್ಯಾಸ್ ಸಿಲಿಂಡರ್ ಸ್ಪೋಟಿಸುವ ಭಯದಿಂದ ಒಳಗಡೆ ಹೋಗುವುದಕ್ಕೆ ಯಾರು ಧೈರ್ಯ ಮಾಡಿಲ್ಲದ ಕಾರಣ ಪೀಠೋಪಕರಣ, ಆಹಾರ ಸಾಮಾಗ್ರಿ, ಪಾತ್ರೆ, ಕಬ್ಬಿಣದ ಕಪಾಟು, ಬಟ್ಟೆಬರೆ, ಚಿನ್ನಾಭರಣ ಹಾಗೂ TVS ಬೈಕ್ ಬೆಂಕಿಗೆ ಆಹುತಿಯಾಗಿದ್ದು, ಸರಿಸುಮಾರು 4ಲಕ್ಷ ರೂ. ಮೌಲ್ಯದ ವಸ್ತು ನಷ್ಟವಾಗಿದೆ. ಸುನೀತಾರವರು ಮತ್ತು ಸ್ಥಳೀಯರು ಹೇಳುವಂತೆ ದೇವರಿಗೆ ಹಚ್ಚಿದ ದೀಪ ಅಲ್ಲೇ ಹತ್ತಿರದಲ್ಲಿ ಇರುವ ಬಟ್ಟೆಯ ಪರದೆಗೆ ಆಕಸ್ಮಿಕವಾಗಿ ತಗಲಿರುವುದರಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ.
ಈ ಘಟನೆಯ ಬಗ್ಗೆ ನಿನ್ನೆ ಗಂಗೊಳ್ಳಿ ಪೋಲಿಸ್ ಠಾಣೆಗೆ ಸುನೀತಾರವರು ದೂರು ನೀಡಿದ್ದಾರೆ, ಅಲ್ಲದೇ ಗ್ರಾಮ ಲೆಕ್ಕಿಗರು, PDO ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರ ಗಮಕ್ಕೆ ತಂದಿದ್ದಾರೆ. ಈ ಘಟನೆ ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್ ವಿ ಅವರ ಗಮನಕ್ಕೆ ಬಂದ ಕೂಡಲೇ ಇಂದು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಗ್ರಾಮಲೆಕ್ಕಿಗರು, PDO, ಪೋಲಿಸ್ ಸಿಬ್ಬಂದಿಗಳೊಂದಿಗೆ ಸ್ಥಳದ ಪರಿಶೀಲನೆ ಮಜರು ಮಾಡಿಸಿದ್ದಾರೆ. ಈ ಪರಿವಾರಕ್ಕೆ ತುರ್ತಾಗಿ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಬೈಂದೂರು ತಹಸೀಲ್ದಾರ್ ಶೋಭಾರವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ PDO ಹರೀಶ್ ಮೊಗವೀರ, ಪೊಲೀಸ್ ಸಿಬ್ಬಂದಿ ನಾಗರಾಜ್, ಸಾಮಾಜಿಕ ಕಾರ್ಯಕರ್ತ ಕೋಡಿ ಅಶೋಕ್ ಪೂಜಾರಿ, ರವೀಂದ್ರ ಎಸ್ಟಿ ಮೋರ್ಚಾ ಸದಸ್ಯ, ಶ್ರೀ ಧರ್ಮಸ್ಥಳ ಸಂಘ ಪಡುಕೋಣೆ ಒಕ್ಕೂಟದ ಸೇವಾ ಪತ್ರಿನಿಧಿ ಸವಿತಾ ಜೆ. ಬಿಲ್ಲವ, ಗ್ರಾಮ ಪಂಚಾಯತ್ ಸದಸ್ಯೆ ಮಮತಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.