ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ : ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Posted On: 17-10-2021 02:45PM

ಉಡುಪಿ : ಪ್ರತೀ ತಿಂಗಳ 3 ನೇ ಶನಿವಾರ ನಡೆಯುತ್ತಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ, ಕೋವಿಡ್19 ನಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಸರ್ಕಾರದ ಸೂಚನೆಯಂತೆ ಅಕ್ಟೋಬರ್ 16 ರಿಂದ ಪ್ರಾರಂಭಗೊಂಡಿದ್ದು, ಬೈಂದೂರು ತಾಲೂಕಿನ ಜಡ್ಕಲ್ ನಲ್ಲಿ , ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂದಿಸಿದ 57 ಕ್ಕೂ ಅರ್ಜಿಗಳಿಗೆ ಸಂಬಂದಿಸಿದಂತೆ ಸೂಕ್ತ ಪರಿಹಾರ ಕೈಗೊಳ್ಳಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಜಡ್ಕಲ್ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು,ಅಲ್ಲಿನ ಗ್ರಂಥಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿದರು,ನಂತರ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಳದ ಪ್ರೌಢಶಾಲೆಗೆ ಬೇಟಿ ನೀಡಿ,ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಕೇಂದ್ರದಿಂದ ಬಹಳಷ್ಟು ದೂರದಲ್ಲಿರುವ ಈ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿವರೆಗೆ ಸಾರ್ವಜನಿಕರು ಆಗಮಿಸಲು ಕಷ್ಟವಾಗಲಿದ್ದು, ಇಲ್ಲಿನ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಾಜು ಪೂಜಾರಿ ಮಾತನಾಡಿ, ದೃಷ್ಠಿದೋಷ ಕುರಿತಂತೆ ಪ್ರಮಾಣಪತ್ರ ಪಡೆಯಲು ಸಮಸ್ಯೆಯಿದೆ, ವಿಕಲಚೇತನರಿಗೆ ಖಾಸಗಿ ಬಸ್ ನಲ್ಲೂ ಉಚಿತ ಪಾಸ್ ವ್ಯವಸ್ಥೆ, ಈಗಾಗಲೇ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿರುವ ಉಚಿತ ಪ್ರಯಾಣದ 100 ಕಿಮೀ ಮಿತಿಯನ್ನು ರಾಜ್ಯಾದ್ಯಂತ ಸಂಚರಿಸಲು ವಿಸ್ತರಿಸಬೇಕು, ಎಲ್ಲಾ ಇಲಾಖೆಗಳಲ್ಲಿನ 5% ಅನುದಾನದ ಸಮರ್ಪಕ ಬಳಕೆಯಾಗಬೇಕು, ಎಲ್ಲಾ ಕಾರ್ಯಾಲಯಗಳನ್ನು ವಿಶೇಷ ಸ್ನೇಹಿ ಕಾರ್ಯಾಲಯಗಳನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದರು. ವಿಕಲಚೇತನರಿಗೆ ಖಾಸಗಿ ಬಸ್ ನಲ್ಲಿ ಉಚಿತ ಪಾಸ್ ನೀಡುವ ಕುರಿತಂತೆ ಆರ್.ಟಿ.ಎ. ಸಭೆಯಲ್ಲಿ ಚರ್ಚಿಸಿ ಪ್ರಯತ್ನಿಸಲಾಗುವುದು, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ವಿಶೇಷ ಚೇತನ ಸ್ನೇಹಿಯಾಗುವಂತೆ ನಿರ್ಮಿಸಬೇಕು ಈ ಬಗ್ಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗುವುದು , ವಿಕಲಚೇತನರಿಗೆ ಮೀಸಲಿರುವ 5% ಅನುದಾನವನ್ನು ಸದ್ಬಳಕೆ ಮಾಡುವ ಕುರಿತಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದ ಜಿಲ್ಲಾಧಿಕಾರಿಗಳು,ಇತರೇ ಸಮಸ್ಯೆಗಳ ಕುರಿತಂತೆ ರಾಜ್ಯಮಟ್ಟದಲ್ಲಿ ನಿರ್ಧಾರವಾಗಬೇಕಿದ್ದು, ಈ ಮನವಿಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಜಡ್ಕಲ್ ಮತ್ತು ಮುದೂರುನಲ್ಲಿ ಸಾರ್ವಜನಿಕ ಹಿಂದೂ ರುದ್ರ ಭೂಮಿ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಸಲ್ಲಿಸಿದ ಮನವಿ ಕುರಿತು ಪರಿಶೀಲಿಸಿದ ಜಿಲ್ಲಾಧಿಕಾರಿಗಳು,ಸ್ಥಳೀಯ ಕಂದಾಯ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದು, ಈಗಾಗಲೇ ಈ ಎರಡೂ ಗ್ರಾಮದಲ್ಲಿ ತಲಾ ಒಂದು ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದ್ದು, ಗಡಿ ಗುರುತು ಮಾಡುವುದು ಬಾಕಿ ಇದೆ, 2 ವಾರಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬೈಂದೂರು ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು. ಮುದೂರು ನಲ್ಲಿ ಆರೋಗ್ಯ ಕೇಂದ್ರಕ್ಕೆ ಸ್ಟಾಫ್ ನರ್ಸ್ ಕೊರತೆಯಿರುವ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆಯಿಂದ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ದೊರೆತಿದ್ದು ಸ್ಥಳೀಯ ಅಥವಾ ಯಾವುದೇ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸಲು ಇಚ್ಚಿಸಿದಲ್ಲಿ ಕೂಡಲೇ ಆದೇಶ ಪತ್ರ ನೀಡಲಾಗುವುದು ಎಂದರು. ಈ ಭಾಗದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಕುರಿತಂತೆ ಗ್ರಾಮಸ್ಥರ ದೂರು ಕುರಿತಂತೆ ಮೆಸ್ಕಾಂ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದರು, ಮುದೂರು ನಲ್ಲಿ ಸಬ್ ಸ್ಟೇಶನ್ ನಿರ್ಮಾಣ ಕಾಮಗಾರಿ ಮುಕ್ತಾಯಗೊಳಿಸಲು ಅರಣ್ಯ ಇಲಾಖೆಯ ಎಕೋ ಸೆನ್ಸಿಟಿವ್ ಝೋನ್ ಸಮಸ್ಯೆಯಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಡ್ಕಲ್ ಗ್ರಾಮ ವ್ಯಾಪ್ತಿಯ ಸಳಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ , ಪ್ರಸ್ತುತ ಖಾಸಗಿ ಶಾಲೆಯನ್ನು ತೊರೆದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿದ್ದು, ಶಾಲಾ ಕಟ್ಟಡವು ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ಕಟ್ಟಡ ಮತ್ತು ಶೌಚಾಲಯವನ್ನು ಆಧುನಿಕ ರೀತಿಯಲ್ಲಿ ಮೇಲ್ದರ್ಜೆಗೇರಿಸುವಂತೆ ಪೋಷಕರು ಕೋರುತ್ತಿದ್ದಾರೆ ಅಲ್ಲದೇ ಶಾಲೆಯಲ್ಲಿ 3 ಜನ ಖಾಯಂ ಶಿಕ್ಷಕರು ಮಾತ್ರವಿದ್ದು, ಒಂದನೇ ತರಗತಿಯಿಂದ ಶಾಲೆಗಳು ಆರಂಭವಾಗುವ ನಿರೀಕ್ಷೆಯಿರುವುದರಿಂದ ಅತಿಥಿ ಶಿಕ್ಷಕರನ್ನು ನೇಮಿಸುವಂತೆ ಶಾಲೆಯ ಶಿಕ್ಷಕರು ಕೋರಿದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಡ್ಕಲ್ ವ್ಯಾಪ್ತಿಯ ಮೆಕ್ಕೆ ಯಲ್ಲಿ ನೂತನ ಅಂಗನವಾಡಿ ಆರಂಭಿಸುವ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ,ಸಾಧ್ಯವಿದ್ದಲ್ಲಿ ಮಿನಿ ಅಂಗನವಾಡಿಯನ್ನು ಶೀಘ್ರದಲ್ಲಿ ಆರಂಭಿಸುವAತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ 95% ಜನ ಪ್ರಥಮ ಡೋಸ್ ಕೋವಿಡ್ ಲಸಿಕೆ ಪಡೆದಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಗ್ರಾಮದಲ್ಲಿ 100% ಪ್ರಥಮ ಡೋಸ್ ಲಸಿಕೆ ಗುರಿ ಸಾಧಿಸುವಂತೆ ಹಾಗೂ ಎರಡನೇ ಡೋಸ್ ಗೆ ಅವಧಿ ಬಂದಿರುವ ಎಲ್ಲಾ ಸಾರ್ವಜನಿಕರು ತಪ್ಪದೇ ಲಸಿಕೆ ಪಡೆಯುವಂತೆ ಹಾಗೂ ಪಡಿತರ ಚೀಟಿಗಳಿಗೆ ಇ ಕೆವೈಸಿ ಮಾಡಿಸುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಡ್ಕಲ್ ಗ್ರಾ.ಪಂ.ಅಧ್ಯಕ್ಷೆ ವನಜಾಕ್ಷಿ, ಉಪಾಧ್ಯಕ್ಷ ಲಕ್ಷö್ಮಣ ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭಾರತಿ ಮತ್ತಿತರರು ಉಪಸ್ಥಿತರಿದ್ದರು. ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮೀ ಸ್ವಾಗತಿಸಿದರು.