ಮೂಳೂರು: ಪಾದಾಚಾರಿ ಮಹಿಳೆಗೆ ಕಾರು ಡಿಕ್ಕಿ, ಮೃತ್ಯು
Posted On:
23-10-2021 08:00PM
ಕಾಪು : ಇಲ್ಲಿನ ಠಾಣಾ ವ್ಯಾಪ್ತಿಯ ಮೂಳೂರು ಯೂನಿಯನ್ ಬ್ಯಾಂಕ್ ಎದುರು ರಾಹೆ 66 ರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಮೃತ ಮಹಿಳೆಯನ್ನು ಮೂಳೂರು ಪಡು ನಿವಾಸಿ 45 ವರ್ಷದ ಆಯಿಸಮ್ಮ ಎಂದು ಗುರುತಿಸಲಾಗಿದೆ.
ಅವರು ಮೂಳೂರು ಯೂನಿಯನ್ ಬ್ಯಾಂಕ್ ಗೆ ವ್ಯವಹಾರಕ್ಕೆಂದು ಬಂದಿದ್ದರು. ಬ್ಯಾಂಕ್ ರಜೆಯ ಕಾರಣ ಅವರು ವಾಪಸಾಗುತ್ತಿದ್ದ ಸಂದರ್ಭ, ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಬೊಲೇನೋ ಕಾರು ಡಿಕ್ಕಿ ಹೊಡೆದಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಹಾದಿಯಲ್ಲಿ ಅವರು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕಾಪು ಠಾಣಾಧಿಕಾರಿ ರಾಘವೇಂದ್ರ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.