ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಡಳಿತ ಸೇವೆಗೆ ಬನ್ನಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.
Posted On:
23-10-2021 08:12PM
ಉಡುಪಿ : ಜಿಲ್ಲೆಯ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಡಳಿತ ಸೇವೆಗೆ ಸೇರ್ಪಡೆಗೊಳ್ಳಬೆಕು, ಈ ಮೂಲಕ ಸಮಾಜದಲ್ಲಿ ತಮ್ಮ ಚಿಂತನೆಯ ಬದಲಾವಣೆಯನ್ನು ತರಬಹುದು ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಸಹಯೋಗದಲ್ಲಿ ಶುಕ್ರವಾರ ಮಣಿಪಾಲ ರಜತಾದ್ರಿ ಸಭಾಂಗಣದಲ್ಲಿ ಆಯೋಜಿಸಿದ್ದ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಕುರಿತು ಹಮ್ಮಿಕೊಂಡ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ತರಬೇತಿ ಕಾರ್ಯಾಗಾರವನ್ನು ಆಫ್ಲೈನ್ ಮತ್ತು ಆನ್ ಲೈನ್ ಎರಡೂ ಮಾದರಿಯಲ್ಲಿ ನಡೆಸುವ ಚಿಂತನೆಯಿದ್ದು, ಸ್ಪರ್ದಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೊದಲು ತಮ್ಮ ಬಗ್ಗೆ ತಾವೇ ಅರಿತಿರಬೇಕು,ಆಸಕ್ತಿಯಿರುವ ಕ್ಷೇತ್ರಗಳ ಬಗ್ಗೆ ತಿಳಿದಿರಬೇಕು. ಸಾಧನೆಯ ಹಾದಿಯಲ್ಲಿ ವೈಪಲ್ಯಗಳು ಎದುರಾದರೂ ಮುನ್ನೆಡೆದು ಗುರಿ ಸಾಧಿಸಬೇಕು , ಶ್ರಮ ಪಟ್ಟರೆ ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟು ಜನರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆ ಬರೆಯಲು ಮುಂದಾಗುತ್ತಿದ್ದಾರೆ. ಆಡಳಿತ ಸರಿ ಇಲ್ಲ ಎನ್ನುವ ಯುವಕರೇ ನಾಗರಿಕ ಸೇವೆಗೆ ಬಂದು ಸರಿಪಡಿಸುವ ಪ್ರಯತ್ನಕ್ಕೆ ಮುಂದಾಗಬೇಕು , ಸುಶಿಕ್ಷಿತರ ಜಿಲ್ಲೆಯಾದ ಉಡುಪಿಯಲ್ಲಿ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯತ್ತ ಒಲವು ತೋರಿಸುವವರ ಸಂಖ್ಯೆ ತುಂಬ ವಿರಳ. ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಒಂದು ಪ್ರದೇಶದಲ್ಲಿ ಕನಿಷ್ಠವೆಂದರು 10 ಅಭ್ಯರ್ಥಿಗಳು ತಯಾರಿ ನಡೆಸುತ್ತಾರೆ ಎಂದರು.
ಯುಪಿಎಸ್ಸಿ ರ್ಯಾಂಕ್ ಆಧಾರದ ಮೇಲೆ ಒಟ್ಟು 19 ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸ್ಥಳೀಯ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗಿನ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಬಹುದಾಗಿದೆ. ವ್ಯವಸ್ಥೆಯನ್ನು ಬದಲಿಸಬೇಕು ಎನ್ನುವ ಹಂಬಲವಿರುವ ಯುವಜನರು ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ನಡೆಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾತನಾಡಿದರು.
ದ.ಕ. ಪ್ರೋಬೆಷನರಿ ಐಎಎಸ್ ಅಧಿಕಾರಿ ಎನ್.ಎಂ.ಎ. ಅಕ್ರಂ ಶಾ, ಕುದುರೆಮುಖ ವನ್ಯ ಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಅಜಿತ್ ಪಾಟೀಲ್ ತಮ್ಮ ಸಾಧನೆಯ ಹಾದಿಯ ಬಗ್ಗೆ ವಿವರಿಸಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಉಡುಪಿ ಕೆಎಂಎಸ್ ಅಕ್ಷತಾ, ಜಿ.ಪಂ. ಯೋಜನಾಧಿಕಾರಿ ಬಾಬು ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಡಾ| ರೋಶನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ನೆಹರೂ ಯುವ ಕೇಂದ್ರದ ವಿಲ್ಫ್ರೆಡ್ ಡಿ'ಸೋಜಾ ಸ್ವಾಗತಿಸಿದರು.