ಶಿರ್ವ : ನವೆಂಬರ್ ೧ರಂದು ಎಣ್ಣೆ ದೀಪದ ಬೀದಿ ದೀಪ ಉದ್ಘಾಟನಾ ಕಾರ್ಯಕ್ರಮ
Posted On:
29-10-2021 05:33PM
ಶಿರ್ವ : ವಿದ್ಯುತ್ ದೀಪಗಳು ಇಲ್ಲದ ಹಲವು ವರ್ಷಗಳ ಹಿಂದೆ ರಸ್ತೆಬದಿಗಳಲ್ಲಿ ಅಲ್ಲಲ್ಲಿ ಎಣ್ಣೆ ದೀಪದ ಬೀದಿ ದೀಪಗಳು ಕಂಡುಬರುತ್ತಿದ್ದವು ಕಲ್ಲಿನ ಕಂಬದಲ್ಲಿ ದೀಪವನ್ನು ಎಣ್ಣೆ ಹಾಕಿ ಇರಿಸಲಾಗುತ್ತಿತ್ತು ದಾರಿಯಲ್ಲಿ ಹೋಗುವವರಿಗೆ ಸ್ಥಳದ ಗುರುತುಹಿಡಿಯಲು ರಸ್ತೆಯಲ್ಲಿ ಹೋಗುವಾಗ ಬೆಳಕಿಗಾಗಿ ಹಾಗೂ ಬ್ಯಾಟರಿ ಗಳಿಲ್ಲದ ಆ ಕಾಲದಲ್ಲಿ ತೂಟ /thute / ಹಿಡಿದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಅದನ್ನು ಉರಿಸಲು ಈ ಎಣ್ಣೆ ದೀಪದ ಬೀದಿದೀಪದ ಉದ್ದೇಶವಾಗಿತ್ತು.
ಇಂತಹ ಬೀದಿದೀಪ ಒಂದು ಬಂಟಕಲ್ಲು ಮಾಧವ ಕಾಮತ್ ರವರ ಮನೆ ಬಳಿ ಇದ್ದ ಬಗ್ಗೆ ತಿಳಿದಿದ್ದು,
ಅಲ್ಲೇ ಸಮೀಪದಲ್ಲಿ ಹೋಟೆಲ್ ಒಂದನ್ನು ನಡೆಸುತ್ತಿದ್ದ ದಿ| ನಾರಾಯಣ ನಾಯಕ್ ಎಂಬವರು ಈ ಕಂಬದಲ್ಲಿರುವ ದೀಪಕ್ಕೆ ಎಣ್ಣೆ ಹಾಕಿ ಸಂಜೆ ಹೊತ್ತಿಗೆ ದೀಪ ಉರಿಸುತ್ತಿದ್ದರು. ಅವರ ನಂತರ ಮಾನಿಪ್ಪಾಡಿ ಪುಂಡಲೀಕ ನಾಯಕ್ ರವರು ದೀಪ ಹಚ್ಚುವುದನ್ನು ಮುಂದುವರಿಸಿದ್ದರು.
ಸುಮಾರು ನಲವತ್ತು, ಐವತ್ತು ವರ್ಷಗಳ ಹಿಂದಿನಿಂದ ಅಶ್ವತ್ಥ ಮರದ ಹತ್ತಿರವಿದ್ದ ಈ ಕಲ್ಲಿನ ಕಂಬವು ಇತ್ತೀಚಿನ ಕೆಲವು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಸಮಯದಲ್ಲಿ ಮುರಿದುಬಿದ್ದಿತ್ತು.
ಹಳೆಯ ನೆನಪನ್ನು ಮರಳಿ ತರುವ ಯತ್ನವಾಗಿ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಧವ ಕಾಮತ್ ರವರ ನೇತೃತ್ವದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯವರ ಸಹಕಾರದೊಂದಿಗೆ ನೂತನ ಎಣ್ಣೆ ದೀಪದ ಬೀದಿ ದೀಪ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ ೧, ಸೋಮವಾರ ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಸಂಜೆ 6 ಗಂಟೆಗೆ ಬಂಟಕಲ್ಲು ಮಾಧವ ಕಾಮತ್ ರವರ ಮನೆಯ ಬಳಿ ಲೋಕಾರ್ಪಣೆಗೊಳ್ಳಲಿದೆ.
ನಮ್ಮ ರಾಜ್ಯದಲ್ಲಿಯೇ ನಡೆಯುವ ಈ ವಿನೂತನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ರಾಮರಾಯ ಪಾಟ್ಕರ್, ಅತಿಥಿಗಳಾಗಿ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುಂಡಲೀಕ ಮರಾಟೆ, ಪುಂಡಲೀಕ ನಾಯಕ್ ಮಾನಿಪ್ಪಾಡಿ, ಶಂಕರ್ ನಾಯಕ್ ಬಂಟಕಲ್ಲು ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.