ಕನ್ನಡ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ವೇದಿಕೆ ಕೊಟ್ಟ 'ಶಾಂತಿ ಪ್ರಕಾಶನ' ಕನ್ನಡಿಗರ ಹೆಮ್ಮೆ: ಸುನೀಲ್ ಅಂಬಲವೆಲೀಲ್
Posted On:
04-11-2021 02:03PM
ವಿಶ್ವದ ಅತಿ ದೊಡ್ಡ ಪುಸ್ತಕ ಮೇಳಗಳಲ್ಲಿ ಒಂದಾದ 'ಶಾರ್ಜಾ ಬುಕ್ ಫೇರ್' ನ ಶಾಂತಿ ಪ್ರಕಾಶನದ ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ದುಬೈನ ಖ್ಯಾತ ವಕೀಲರು, ದುಬೈನ 'ದಿ ಲಾ ರಿಪೋರ್ಟರ್ಸ್' ಕಾನೂನು ಸಂಸ್ಥೆಯ ಸ್ಥಾಪಕರಾದ ಸುನೀಲ್ ಅಂಬಲವೆಲೀಲ್, ಶಾಂತಿ ಪ್ರಕಾಶನ ಸಂಸ್ಥೆ ಶಾರ್ಜಾ ಪುಸ್ತಕ ಮೇಳದಲ್ಲಿ ಸತತವಾಗಿ ಭಾಗವಹಿಸುತ್ತಾ ಕನ್ನಡ ಸಾಹಿತ್ಯಕ್ಕೆ ಅಂತರಾಷ್ಟ್ರೀಯ ವೇದಿಕೆ ಕೊಡುತ್ತಿದೆ, ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.' ಎಂದರು.
'ಧಾರ್ಮಿಕ, ಸಾಮಾಜಿಕ, ರಾಜಕೀಯ, ಹಾಗೂ ಸಾಂಸ್ಕ್ರತಿಕ ವಿಚಾರಧಾರೆಗಳನ್ನು ಬಿಂಬಿಸುವ ಕೃತಿಗಳನ್ನು ಹೊರತಂದಿರುವ ಶಾಂತಿಪ್ರಕಾಶನ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಮತ್ತು ಸಾಹೋದರ್ಯತೆಯ ವಾತಾವರಣವನ್ನು ಬೆಳೆಸುವ ಕೆಲಸವನ್ನು ಮಾಡುತ್ತಿದೆ. ಉನ್ನತ ಮೌಲ್ಯಗಳನ್ನು ತನ್ನದಾಗಿಸಿಕೊಂಡಿರುವ ಈ ಸಂಸ್ಥೆಯು ವಿಶ್ವಮಟ್ಟಕ್ಕೆ ಬೆಳೆಯಲಿ' ಎಂದು ಹಾರೈಸಿದರು.
ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಅಬ್ದುಲ್ ಸಲಾಂ ಪುತ್ತಿಗೆಯವರು ಮಾತನಾಡಿ 'ಇಷ್ಟು ದೊಡ್ಡ ಪುಸ್ತಕ ಮೇಳದಲ್ಲಿ ಕನಿಷ್ಠ 25 ಮಳಿಗೆ ಕನ್ನಡಿಗರದ್ದು ಇರಬೇಕಿತ್ತು, ಆದರೆ ಕಳೆದ ಹಲವಾರು ವರ್ಷಗಳಿಂದ ಏಕೈಕ ಶಾಂತಿಪ್ರಕಾಶನ ಕನ್ನಡಿಗರ ಪ್ರತಿನಿಧಿಯಾಗಿ ಭಾಗವಹಿಸುತ್ತಿದೆ'. ಎಂದು ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದರು.
ಕರ್ನಾಟಕ ಸಂಘ ಶಾರ್ಜ ಅಧ್ಯಕ್ಷ ಎಂ. ಇ ಮೂಳೂರ್, ಹೆಮ್ಮೆಯ ಯುಎಇ ಕನ್ನಡಿಗರು ಅಧ್ಯಕ್ಷೆ ಮಮತಾ ಮೈಸೂರು, ಹೈದರ್ ನಿರ್ಕಜೆ, ನೂರ್ ಅಶ್ಫಾಕ್, ನೋಯೆಲ್ ಅಲ್ಮೇಡಾ, ಮಹಮ್ಮದ್ ಮೊಹ್ಶೀನ್, ರಫೀಕ್ ಅಲಿ, ಕನ್ನಡಿಗಾಸ್ ಫೆಡರೇಷನ್ ನ ಇಮ್ರಾನ್ ಖಾನ್ ಎರ್ಮಾಳ್, ಸೆಂಥಿಲ್ ಬೆಂಗಳೂರು, ಅನ್ಸಾರ್ ಬಾರ್ಕೂರ್ ಉಪಸ್ಥಿತರಿದ್ದರು.