ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್ ವತಿಯಿಂದ ಕಂಪ್ಯೂಟರ್‌ಗಳ ಹಸ್ತಾಂತರ
Posted On:
12-11-2021 03:03PM
ಉದ್ಯಾವರ : ಇಂದು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳು ಆಂಗ್ಲ ಮಾಧ್ಯಮದ ಶಾಲೆಗಳ ಕಾರಣಗಳಿಂದಾಗಿ ಸವಾಲನ್ನು ಎದುರಿಸುತ್ತಿವೆ. ಇದನ್ನು ಸಶಕ್ತವಾಗಿ ಎದುರಿಸಲು ಕನ್ನಡ ಮಾಧ್ಯಮ ಶಾಲೆಗಳೂ ಆಧುನಿಕ ಶಿಕ್ಷಣದ ಆಯಾಮಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರು ಸಾಧನೆಗಳನ್ನು ಮಾಡಲು ಸಾಧ್ಯವಿಲ್ಲ ಎಂಬ ಹುಂಬತನವನ್ನು ಬಿಟ್ಟು ನಾವು ಸುತ್ತ ನೋಡಿದರೆ ನಮ್ಮ ಸುತ್ತಿರುವ ಸಾಧಕರು ಹೆಚ್ಚಿನವರು ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದುಕೊಂಡವರು. ಕನ್ನಡದ ವಿದ್ಯಾರ್ಥಿಗಳು ಹೆತ್ತವರು ಕೀಳರಿಮೆಯನ್ನು ತೊಡೆದು ಹಾಕಿ. ಆಧುನಿಕ ಶಿಕ್ಷಣ ವ್ಯವಸ್ಥೆಗಳನ್ನು ಈ ಶಾಲೆ ಅಳವಡಿಸಿಕೊಂಡದ್ದರಿಂದ ಆಂಗ್ಲ ಮಾಧ್ಯಮದ ಸವಾಲುಗಳ ಮತ್ತು ಸ್ಪರ್ಧೆಗಳ ನಡುವೆ ಕೂಡಾ ಆರೋಗ್ಯಕರವಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಈ ಶಾಲೆ ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಹೆತ್ತವರಿಗೆ ಈ ಶಾಲೆಯ ಶಿಕ್ಷಕರ ಮತ್ತು ಆಡಳಿತ ವರ್ಗದ ಮೇಲಿರುವ ನಂಬಿಕೆ, ಈ ನಂಬಿಕೆಯನ್ನು ಉಳಿಸಿಕೊಳ್ಳಲು ಈ ಶಾಲೆ ಸದಾ ಪ್ರಯತ್ನಿಸ ಬೇಕಾಗಿದೆ ಎಂದು ಕರ್ನಾಟಕ ಬ್ಯಾಂಕ್‌ನ ಉಡುಪಿ ರೀಜನಲ್ ಆಫೀಸ್‌ನ ಎ.ಜಿ.ಎಂ. ರಾಜಗೋಪಾಲ ಬಿ. ಹೇಳಿದರು.
ಅವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್ ಕೊಡಮಾಡಿದ ಕಂಪ್ಯೂಟರ್‌ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.
ಅವರು ಮುಂದುವರಿಯುತ್ತಾ ಕಳೆದ 18 ತಿಂಗಳಲ್ಲಿ ಶಾಲೆಗಳು ವಿದ್ಯಾರ್ಥಿಗಳು ಇಲ್ಲದೇ ದೇವರುಗಳು ಇಲ್ಲದ ದೇವಸ್ಥಾನಗಳ ಹಾಗೆ ಇದ್ದವು. ಈಗ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಿದ್ದಾರೆ. ಈ ಕುಶಿ ಸದಾ ಮುಂದುವರಿಯಲಿ. ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಯಾದರೂ ಶಿಕ್ಷಣದ ಬಗ್ಗೆ ಈ ರೀತಿ ಕಾಳಜಿ ವಹಿಸುತ್ತಿರುವ ಈ ಶಾಲೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಒಂದು ಶಾಲೆ 160 ವರುಷ ಬಾಳಿ ಬದುಕ ಬೇಕಾದರೆ ಶಾಲೆಯ ಅಂತಸತ್ವ ಗಟ್ಟಿಯಾಗಿರಬೇಕು. ಮುಂದಿನ ದಿನಗಳಲ್ಲೂ ಈ ಶಾಲೆಗೆ ನೆರವಾಗಲು ನಮ್ಮ ಕರ್ನಾಟಕ ಬ್ಯಾಂಕ್ ಬದ್ಧವಾಗಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಬ್ಯಾಂಕ್ ಉಡುಪಿ ಕನ್ನರ್ಪಾಡಿ ಶಾಖೆಯ ಪ್ರಬಂಧಕರಾದ ಮಂಜುನಾಥರವರು ಮಾತನಾಡಿ ಡಿಜಿಟಲ್ ಇಂಡಿಯಾ ಚಾಲ್ತಿಯಲ್ಲಿರುವ ಈ ಹೊತ್ತು ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಕಲಿಯಬೇಕಾದ ಅನಿವಾರ್ಯತೆ ಇದೆ. ಅದನ್ನು ಕಲಿಯಲು ನಾವು ಮನ ಮಾಡದಿದ್ದರೆ ಬೆಳೆಯುತ್ತಿರುವ ಸಮಾಜದೊಂದಿಗೆ ನಮನ್ಮು ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕಾಗಿ ಶಾಲೆಗಳಲ್ಲಿ ಕಂಪ್ಯೂಟರ್ ಕಲಿಕೆ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಆಲೋಚಿಸಿ ಯೋಜನೆಯನ್ನು ಈ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಳವಡಿಸಿದ ಆಡಳಿತ ಮಂಡಳಿ ಅಭಿನಂದನಾರ್ಹರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಗಣಪತಿ ಕಾರಂತ್‌ರವರು ಮಾತನಾಡಿ ಶಾಲಾ ಅಭಿವೃದ್ಧಿಗೆ ಸರ್ವರ ಕೊಡುಗೆಯನ್ನು ಸ್ಮರಿಸಿ, ಶಾಲಾಡಳಿತ ಮಂಡಳಿ ಹಾಕಿಕೊಂಡ ಮುಂದಿನ ಯೋಜನೆಗೂ ಸಹಕಾರವನ್ನು ಕೋರಿದರು.
ಶಾಲಾಡಳಿತ ಸಮಿತಿ ಸದಸ್ಯರಾದ ಯು.ಬಿ. ಶ್ರೀನಿವಾಸ್, ಯು. ಪ್ರತಾಪ್ ಕುಮಾರ್, ಯು. ರಾಜೇಂದ್ರ ಮಯ್ಯ, ಕೃಷ್ಣ ಕುಮಾರ್ ರಾವ್, ಡಾ. ತ್ರಿವೇಣಿ, ಉದ್ಯಾವರ ನಾಗೇಶ್ ಕುಮಾರ್ ಮತ್ತು ಉದ್ಯಾವರ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ಅಬ್ದುಲ್ ರಶೀದ್ ರಹಮಾನಿಯವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಲಾ ಸಂಚಾಲಕರಾದ ಸುರೇಶ್ ಶೆಣೈ ಯು. ಸ್ವಾಗತಿಸಿದರು. ಶಾಲಾ ಸಹ ಶಿಕ್ಷಕಿ ಅನುರಾಧ ಕಾರ್ಯಕ್ರಮ ನಿರ್ವಹಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ ವಂದಿಸಿದರು.