ಸಂಘಟನೆ ವಿರುದ್ಧ ಆರೋಪ ; ನಾಳೆಯೊಳಗೆ ಕ್ಷಮೆಯಾಚಿಸದಿದ್ದರೆ ಬಹಿರಂಗ ಪ್ರತಿಭಟನೆ : ಬಿರುವೆರ್ ಕುಡ್ಲ ಸಂಘಟನೆ ಎಚ್ಚರಿಕೆ
Posted On:
17-11-2021 08:05PM
ಉಡುಪಿ: ನಾಳೆಯೊಳಗಾಗಿ ಸಂಘಟನೆ ವಿರುದ್ಧದ ಆರೋಪಕ್ಕೆ ಶರಣ್ ಪಂಪ್‌ವೆಲ್ ಕ್ಷಮೆಯಾಚಿಸದಿದ್ದರೆ ಬಳ್ಳಾಲ್‌ಬಾಗ್‌ನಲ್ಲಿ ಬಹಿರಂಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿರುವೆರ್ ಕುಡ್ಲ ಸಂಘಟನೆ ಎಚ್ಚರಿಕೆ ನೀಡಿದೆ.
ಬಿರುವೆರ್ ಕುಡ್ಲ ಉಡುಪಿ ಘಟಕದಿಂದ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಬಿರುವೆರ್ ಕುಡ್ಲ ಸಂಘಟನೆಯ ಹೆಸರನ್ನು ಕೆಡಿಸಲು ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ಸಂಘಟನೆ ಮಾಡುವ ಉತ್ತಮ ಸಮಾಜ ಸೇವೆಯನ್ನು ಕಂಡು ಸಹಿಸಲಾಗದ ಕೆಲವೊಂದು ವ್ಯಕ್ತಿಗಳು ನಮ್ಮ ಸಂಘಟನೆಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಶರಣ್ ಪಂಪ್‌ವೆಲ್ ಅವರು ಪೂರ್ಣ ಮಾಹಿತಿಯನ್ನು ತಿಳಿಯದೇ ಸಂಘಟನೆಯ ಮೇಲೆ ಆರೋಪ ಮಾಡಿ ನೋವುಂಟು ಮಾಡಿದ್ದಾರೆ. ಇದಕ್ಕಾಗಿ ಅವರು ಸಂಘಟನೆಯ ಕ್ಷಮೆಯಾಚಿಸಬೇಕು. ನಾಳೆಯ ಒಳಗೆ ಕ್ಷಮೆ ಕೇಳದೇ ಇದ್ದಲ್ಲಿ ಬಳ್ಳಾಲ್‌ಬಾಗ್‌ನಲ್ಲಿ ಬಹಿರಂಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಕೌಟುಂಬಿಕ ಸಂಬಂಧಗಳ ಆಧಾರದಲ್ಲಿ ಮೆಚ್ಚಿಸಲು ಏಕಾಏಕಿ ಬಿರುವೆರ್ ಕುಡ್ಲದ ಮೇಲೆ ಆರೋಪ ಮಾಡುವುದು ಸಲ್ಲದು. ಗುರ್ಜಿ ದೀಪೋತ್ಸವ ಮಾಡುವ ಜವಾಬ್ದಾರಿಯನ್ನು ಹೊತ್ತ ಸಮಿತಿಯ ಪವಿತ್ರ ಜಾಗದಲ್ಲಿ ಕುಡಿದು ಕುಪ್ಪಳಿಸಿ ದಾರಿಯಲ್ಲಿ ಹೋಗುವವರಿಗೆ ಗುರಾಯಿಸಿ ನೋಡುವ, ತಮಾಷೆ ಮಾಡುವ ಮೂಲಕ ಪ್ರಚೋದನೆ ನೀಡಿ ಹೊರಗಿನಿಂದ ಬಂದ ಜನ ಪಾರ್ಟಿಯ ಹೆಸರಿನಲ್ಲಿ ಗಲಾಟೆಗೆ ಕಾರಣರಾಗುತ್ತಿದ್ದಾರೆ. ಶರಣ್ ಪಂಪ್‌ವೆಲ್ ಅವರು ಮೊದಲು ಇದನ್ನು ತಡೆಯುವ ಕೆಲಸವನ್ನು ಮಾಡಬೇಕಿದೆ. ಬಳ್ಳಾಲ್ ಬಾಗ್‌ನಲ್ಲಿ ಬಂದು ಯಾರು ಗಲಾಟೆ ಮಾಡುತ್ತಿದ್ದಾರೆ ಎನ್ನುವುದನ್ನು ಶರಣ್ ಪಂಪ್‌ವೆಲ್ ಅವರು ಮೊದಲು ತಿಳಿದುಕೊಳ್ಳಬೇಕು ಎಂದು ಬಿರುವೆರ್ ಕುಡ್ಲ ಸಂಘಟನೆ ಹೇಳಿದೆ
ಪೊಲೀಸ್ ಇಲಾಖೆ ಕೂಡಾ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದ ತನಿಖೆ ಮಾಡುತ್ತಿದ್ದು, ಎಲ್ಲಿಯೂ ಬಿರುವೆರ್ ಕುಡ್ಲದ ಹೆಸರು ಪ್ರಸ್ತಾಪಿಸಿಲ್ಲ. ಒಂದೆರಡು ವ್ಯಕ್ತಿಗಳು ಬಂದು ನಮ್ಮ ಸಂಘಟನೆಯ ಮೇಲೆ ವಿನಾಕಾರಣ ಆರೋಪ ಮಾಡಿದರೆ ಜನತೆ ನಂಬುವುದಿಲ್ಲ. ಬಿರುವೆರ್ ಕುಡ್ಲದ ವತಿಯಿಂದ ಸಮಾಜ ಸೇವೆ ಮುಂದುವರಿಯಲಿದೆ. ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದಲ್ಲಿ ಬಿರುವೆರ್ ಕುಡ್ಲ ಸಂಘಟನೆಯ ಪಾತ್ರವಿಲ್ಲ. ಹಲ್ಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಶರಣ್ ಪಂಪ್‌ವೆಲ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಬಿರುವೆರ್ ಕುಡ್ಲ ಉಡುಪಿ ಘಟಕದ ಸಂಘಟನೆಯ ಉಡುಪಿ ಘಟಕ ಅಧ್ಯಕ್ಷ ಕಿಶೋರ್ ಪೂಜಾರಿ, ಉಪಾಧ್ಯಕ್ಷರಾದ ದಿನೇಶ್ ಅಮಿನ್, ಖಜಾಂಚಿ ರಾಜೇಶ್ ಕೊಪ್ಪ, ಕಾರ್ಯದರ್ಶಿ ಯೋಗಿಶ್ ಅಮಿನ್, ಮಾಧ್ಯಮ ಸಲಹೆಗಾರ ತೇಜಸ್ ಬಂಗೇರಾ ಉಪಸ್ಥಿತರಿದ್ದರು.