ಮಂಗಳೂರು : ಇಲ್ಲಿನ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನ ಮೇಲೆ ಮೊಬೈಲ್ ಕಳ್ಳತನದ ಆರೋಪ ಮಾಡಿ ತಂಡವೊಂದು ಆತನನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆಗೈದ ಪ್ರಕರಣ ಮಂಗಳೂರಿನ ದಕ್ಕೆಯಲ್ಲಿ ನಡೆದಿದೆ.
ಡಿಸೆಂಬರ್ 14ರಂದು ರಾತ್ರಿ ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವ ಆಂದ್ರಪದೇಶದ, ಪಕಾಶಂ ಜಿಲ್ಲೆಯ, ಕಾಟಮ್ವಾರಿ ಪಾಲಮ್ ನಿವಾಸಿ ವೈಲ ಶೀನು (32) ಎಂಬಾತನು ಮಂಗಳೂರು ದಕ್ಕೆಯಲ್ಲಿ ನಿಲ್ಲಿಸಿದ್ದ JOHN SHAILESH 2 ಎಂಬ ಬೋಟಿಗೆ ಹೋಗಿ ವಾಪಾಸು ತಾನು ಕೆಲಸ ಮಾಡುವ ಬೋಟಿನಲ್ಲಿ ಮಲಗಿರುತ್ತಾನೆ. ಮರುದಿನ JOHN SHAILESH 2 ಬೋಟಿನಲ್ಲಿ ಕೆಲಸ ಮಾಡುತ್ತಿರುವ ಆಂಧ್ರಪ್ರದೇಶದ ಕರಪಿಂಗಾರ ರವಿ, ಕೊಂಡೂರು ಪೊಲಯ್ಯ, ಅವುಲ ರಾಜಕುಮಾರ್, ಕಾಟಂಗರಿ ಮನೋಹರ್, ವುಟುಕುರಿ ಜಾಲಯ್ಯ ಹಾಗೂ ಪ್ರಲಯ ಕಾವೇರಿ ಗೋವಿಂದಯ್ಯರವರು ವೈಲ ಶೀನು ರವರಲ್ಲಿಗೆ ಬಂದು, ನಿನ್ನೆ ರಾತ್ರಿ ಬೋಟಿಗೆ ಬಂದವನು ಮೊಬೈಲ್ ಕಳ್ಳತನ ಮಾಡಿದ್ದೀಯಾ ಎಂದು ಹೇಳಿ, ಬೆಳಿಗ್ಗೆ 11-15 ಗಂಟೆಗೆ ವೈಲ ಶೀನು ನನ್ನು ಅಪಹರಿಸಿಕೊಂಡು JOHN SHAILESH 2 ಬೋಟಿಗೆ ಹೋಗಿ, ಎಲ್ಲರು ಸೇರಿಕೊಂಡು ವೈಲ ಶೀನುವಿನ ಕೈ ಕಾಲುಗಳನ್ನು ಹಿಡಿದು, ಬೊಬ್ಬೆ ಹಾಕದಂತೆ ಬಾಯಿ ಮುಚ್ಚಿ, ಎರಡೂ ಕಾಲುಗಳನ್ನು ಜೋಡಿಸಿ ಹಗ್ಗದಿಂದ ಕಟ್ಟಿ, ಬಳಿಕ ಕಾಲಿಗೆ ಕಟ್ಟಿದ ಹಗ್ಗವನ್ನು ಬೋಟ್ ನ ಆರಿಯ ಕೊಕ್ಕೆಗೆ ಸಿಕ್ಕಿಸಿ ತಲೆ ಕೆಳಗಡೆ ಮಾಡಿ ವೈಲ ಶೀನು ರವರನ್ನು ನೇತಾಡಿಸಿ, ಕೈಗಳಿಂದ, ಮರದ ರೀಪಿನಿಂದ ಹಾಗೂ ಕಬ್ಬಿಣದ ಸರಳಪಳಿಯಿಂದ ಹಲ್ಲೆ ನಡೆಸಿ ಕೊಲೆ ನಡೆಸಲು ಪುಯತ್ನಿಸಿರುತ್ತಾರೆ. ಆರೋಪಿಗಳು ವೈಲು ಶೀನುವಿನ ಕಾಲುಗಳನ್ನು ಕಟ್ಟಿ, ಸಮುದ್ರಕ್ಕೆ ಬಿಸಾಡಿ ಕೊಲೆ ನಡೆಸಲು ಮಾತುಕತೆ ನಡೆಸಿದ್ದು, ಆ ಸಮಯ ಸಾರ್ವಜನಿಕರು ಬಂದು ವೈಲು ಶೀನುವನ್ನು ರಕ್ಷಿಸಿರುತ್ತಾರೆ.
ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅಪಹರಣ ಹಾಗೂ ಕೊಲೆಯತ್ನ ಪ್ರಕರಣ ಡಿಸೆಂಬರ್ 21ರಂದು ರಾತ್ರಿ ದಾಖಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳಾದ ಡಿಸೆಂಬರ್ 22ರಂದು ಸಂಜೆ 6ಗಂಟೆಗೆ ಮಂಗಳೂರು ದಕ್ಕೆ ಬಳಿಯಿಂದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಮರದ ರೀಪು, ಕಬ್ಬಿಣದ ಸರಪಳಿ, ಹಗ್ಗ ಹಾಗೂ ಮೊಬೈಲ್ ಹ್ಯಾಂಡ್ ಸೆಟ್ಟನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.